ಜಿಲ್ಲೆ

ಜೀತ ಪದ್ಧತಿ ಇನ್ನೂ ಜೀವಂತ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಕಳೆದರೂ ಜೀತ ಪದ್ಧತಿ ಇನ್ನೂ ಜೀವಂತವಾಗಿರುವುದು ಶೋಚನೀಯ ಸಂಗತಿ. ಈ ಅನಿಷ್ಟ ಪದ್ಧತಿಯನ್ನು ನಿಮೂರ್ಲನೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜಿಪಂ ಸಿಇಒ ಜಿ.ಪ್ರಭು ಹೇಳಿದರು.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಹಾಗೂ ಜಿಪಂ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಜೀತ ಪದ್ಧತಿ ನಿಮೂರ್ಲನಾ ದಿನಾಚರಣೆ ಮತ್ತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದವರು ಜೀತ ಪದ್ಧತಿಗೆ ಒಳಗಾಗುತ್ತಾರೆ. ಜೀತ ಪದ್ಧತಿಯಿಂದ ಮಾನವ ಹಕ್ಕುಗಳಿಗೆ ಚ್ಯುತಿಯುಂಟಾಗುತ್ತದೆ. ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ನಂತರ ಜೀತ ಪದ್ಧತಿ, ಸತಿ ಸಹಗಮನ, ಅಸ್ಪಶ್ಯತೆ, ಮಾನವ ಕಳ್ಳಸಾಗಾಣಿಕೆ, ಮ್ಯಾನ್ಯುಯಲ್​ ಸ್ಕ್ಯಾವೆಂಜಿಂಗ್​ಗಳಂತಹ ಅನಿಷ್ಟ ಪದ್ಧತಿಗಳನ್ನು ನಿಮೂರ್ಲನೆಗೊಳಿಸುವಲ್ಲಿ ಯಶಸ್ವಿ ಹೆಜ್ಜೆಗಳನ್ನು ಹಾಕುತ್ತಿದ್ದೇವೆ ಎಂದು ತಿಳಿಸಿದರು.

ಜೀತ ಪದ್ಧತಿ ನಿಮೂರ್ಲನೆ ಕಾಯ್ದೆಯು 1976ರಲ್ಲಿ ಜಾರಿಗೆ ತರಲಾಗಿದ್ದು, ಕಾಯ್ದೆಯ ಅನುಷ್ಟಾನದ ಜವಾಬ್ದಾರಿಯನ್ನು ಎಲ್ಲ ಅಧಿಕಾರಿಗಳಿಗೆ ನೀಡಲಾಗಿದೆ. ಜೀತ ಪದ್ಧತಿಗೆ ಬಡತನವೇ ಮುಖ್ಯ ಕಾರಣ. ಜೀತ ಕಾರ್ಮಿಕರನ್ನು ಮುಖ್ಯ ವಾಹಿನಿಗೆ ತರುವ ಹೊಣೆಗಾರಿಕೆ ಎಲ್ಲ ಅಧಿಕಾರಿಗಳ ಮೇಲಿದೆ. ಜೀತ ವಿಮುಕ್ತರಿಗೆ ಕಾಯ್ದೆಗಳ ಮೂಲಕ ಭದ್ರತೆ ಒದಗಿಸಿ ಪುನರ್ವಸತಿ ಕಲ್ಪಿಸಬೇಕು. ಜೀತ ನಿಮೂರ್ಲನಾ ಕಾಯ್ದೆಯಿಂದ ಜೀತ ಪದ್ಧತಿಯನ್ನು ತಡೆಯುವುದಷ್ಟೇ ಅಲ್ಲದೆ ಜೀತ ವಿಮುಕ್ತ ವ್ಯಕ್ತಿಗೆ ಜೀವನ ನಿರ್ವಹಣೆಗಾಗಿ ಉದ್ಯೋಗ ನೀಡಿ ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ನಮ್ಮೆಲ್ಲರ ಹೊಣೆ ಎಂದು ಹೇಳಿದರು.

ಸಾಯುವವರೆಗೆ ಯಜಮಾನನ ಕಪಿಮುಷ್ಠಿಯಲ್ಲಿ ದುಡಿಯುವ ಜೀತ ಕಾರ್ಮಿಕರನ್ನು ಮುಖ್ಯವಾಹಿನಿಗೆ ತರಲು ಹಾಗೂ ಜೀತ ಪದ್ಧತಿಯನ್ನು ನಿಮೂರ್ಲನೆ ಮಾಡಲು ಸರ್ಕಾರದೊಂದಿಗೆ ಹಲವಾರು ಸಂಘಟನೆಗಳು ಕೈಜೋಡಿಸುತ್ತಿರುವುದು ಸ್ವಾಗತಾರ್ಹ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್​. ತಿಪ್ಪೇಸ್ವಾಮಿ ತಿಳಿಸಿದರು.

ಮನುಷ್ಯನ ಹುಟ್ಟು-ಸಾವಿನ ನಡುವೆ ದುಡಿಮೆ ಅನಿವಾರ್ಯ. ಯಾವುದೇ ಚಲನ-ವಲನಕ್ಕೆ ಸ್ವತಂತ್ರವಿಲ್ಲದೆ ಒಬ್ಬ ವ್ಯಕ್ತಿಯನ್ನು ಹಿಡಿತದಲ್ಲಿಟ್ಟುಕೊಂಡು ಬದುಕಿಗೆ ನಿರ್ಬಂಧ ಹೇರುವುದೇ ಜೀತ ಪದ್ಧತಿ. ಮನುಷ್ಯನ ದುಡಿಮೆಯಲ್ಲಿ ಇತಿಮಿತಿ ಇರಬೇಕು. ನಿರಂತರ ಸೇವೆಯ ನಡುವೆ ವಿಶ್ರಾಂತಿ ನೀಡುವುದು ಅವಶ್ಯ. ಜೀತ ಕಾರ್ಮಿಕ ಪದ್ಧತಿಯು ಮಾನವ ಕಳ್ಳಸಾಗಣೆಯ ಒಂದು ಬಲವಂತದ ರೂಪವಾಗಿದ್ದು, ಈ ಪದ್ಧತಿಯಲ್ಲಿ ಕಾರ್ಮಿಕರು ಭಾರತೀಯ ಸಂವಿಧಾನವು ಖಾತರಿಪಡಿಸಿರುವ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಕಳೆದುಕೊಳ್ಳುವಂತೆ ಒತ್ತಾಯಿಸಲಾಗುತ್ತದೆ. ಜೀತ ಪದ್ಧತಿ ಕಂಡು ಬಂದವರು ಕಾರ್ಮಿಕ ಸಹಾಯವಾಣಿ 155214ಕ್ಕೆ ಮಾಹಿತಿ ನೀಡುವ ಮೂಲಕ ಈ ಅನಿಷ್ಠ ಪದ್ಧತಿಯನ್ನು ರದ್ದುಗೊಳಿಸುವಲ್ಲಿ ಸಹಕರಿಸಬೇಕೆಂದು ಮನವಿ ಮಾಡಿದರು.

ಜೀತ ಪದ್ಧತಿ ರಾಜ್ಯದಲ್ಲಿ ಇನ್ನು ಚಾಲ್ತಿಯಲ್ಲಿರುವುದು ನೋವಿನ ಸಂಗತಿಯಾಗಿದೆ. ಸಾಲದಾತ ಸಾಲಗಾರನನ್ನು ಜೀತಕ್ಕಿಟ್ಟುಕೊಳ್ಳುವುದು ಕಾನೂನು ಅಪರಾಧವಾಗುತ್ತದೆ. ನಮ್ಮ ಸಂವಿಧಾನದ ಆಶಯದಂತೆ ಪ್ರತಿಯೊಬ್ಬರೂ ಗೌರವಯುತವಾಗಿ ಬದುಕಲು ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಮಾನವ ಹಕ್ಕುಗಳು ಉಲ್ಲಂಘನೆಯಾದರೆ ಕಾನೂನು ನೆರವು ಪಡೆಯಬೇಕು ಎಂದು ಮುಕ್ತಿ ಅಲೆಯನ್ಸ್​ನ ಸಂಚಾಲಕಿ ಬೃಂದ ಆಡಿಗೆ ಸಲಹೆ ನೀಡಿದರು.

ಜೀತ ವಿಮುಕ್ತ ಕರ್ನಾಟಕ(ಜೀವಿಕ) ಸಂಘಟನೆಯ ಜಿಲ್ಲಾ ಸದಸ್ಯೆ ಚಿಕ್ಕಮ್ಮ, ತುಮಕೂರು ಉಪ ವಿಭಾಗಾಧಿಕಾರಿ ಗೌರವ್​ ಕುಮಾರ್​ ಶೆಟ್ಟಿ, ಜಿಪಂ ಉಪ ಕಾರ್ಯದರ್ಶಿಗಳಾದ ಹಾಲಸಿದ್ದಪ್ಪ ಪೂಜೇರಿ, ಸಂಜೀವಪ್ಪ, ಯೋಜನಾ ನಿರ್ದೇಶಕ ಎನ್​. ನಾರಾಯಣ ಸ್ವಾಮಿ, ತಿಪಟೂರು ಉಪ ವಿಭಾಗಾಧಿಕಾರಿ ಬಿ.ಕೆ.ಸಪ್ತಶ್ರೀ, ಮಧುಗಿರಿ ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ ತಹಸೀಲ್ದಾರ್​ ಪಿ.ಎಸ್​.ರಾಜೇಶ್ವರಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಮಧುಗಿರಿ ಡಿಡಿಪಿಐ ಗಿರಿಜಮ್ಮ, ಜಿಲ್ಲಾ ಕಾರ್ಮಿಕ ಅಧಿಕಾರಿ ತೇಜಾವತಿ ಉಪಸ್ಥಿತರಿದ್ದರು.