ಜಿಲ್ಲೆ

ಮಲ್ಪೆ ಬಂದರಿನಲ್ಲಿ ರಾಶಿ ರಾಶಿ ಬೊಂಡಾಸ್​ ಮೀನು

ಗೋಪಾಲಕೃಷ್ಣ ಪಾದೂರ್

ಉಡುಪಿ: ಮೀನುಗಾರಿಕಾ ಋತು ಪ್ರಾರಂಭವಾಗಿ ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳುತ್ತಿರುವ ಬೋಟುಗಳಿಗೆ ಭಾರೀ ಪ್ರಮಾಣದಲ್ಲಿ ಬೋಂಡಾಸ್​ ಮೀನುಗಳು ಲಭಿಸುತ್ತಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿರುವುದರಿಂದ ಕೆಜಿಗೆ 400 ರಿಂದ 500 ರೂ. ಇದ್ದ ದರ ಈ ವರ್ಷ ದಿಢೀರ್​ 100 ರೂ.ಗೆ ಕುಸಿದಿದೆ.

ಆ.7ರಂದು ಮಲ್ಪೆ ಬಂದರಿನಿಂದ ತೆರಳಿದ ನೂರಾರು ಆಳಸಮುದ್ರ ಮೀನುಗಾರಿಕಾ ಬೋಟುಗಳು 10 ದಿನಗಳ ಮೀನುಗಾರಿಕೆ ಮುಗಿಸಿ ಕಳೆದ ಎರಡು ಮೂರು ದಿನಗಳಿಂದ ಮಲ್ಪೆ ಬಂದರಿಗೆ ವಾಪಸಾಗುತ್ತಿದೆ. ಎಲ್ಲಾ ಬೋಟ್ಗಳಲ್ಲಿ ಈ ಬಾರಿ ಟನ್​ ಗಟ್ಟಲೆ ಬೊಂಡಾಸೆ ಮೀನುಗಳೇ ಲಭಿಸಿದ್ದು, ಇದರಿಂದ ಬಂದರಿನಲ್ಲಿ ಬೊಂಡಾಸ್​ ಮೀನುಗಳ ರಾಶಿ ಕಾಣ ಸಿಗುತ್ತಿದೆ.

ಬೊಂಡಾಸ್​ ಮೀನಿಗೆ ಯುರೋಪ್​ ದೇಶಗಳಲ್ಲಿ ಹೆಚ್ಚಿನ ಬೇಡಿಕೆಗಳಿದ್ದರಿಂದ ಮಲ್ಪೆಯಿಂದ ರಫ್ತು ಆಗುತ್ತಿತ್ತು. ಆದರೆ ಕಳೆದ ಮಾರ್ಚ್​ನಿಂದ ಯುರೋಪ್​ ದೇಶಗಳಲ್ಲಿ ಆರ್ಥಿಕ ಹಿಂಜರಿತ ಕಂಡುಬಂದಿರುವುದರಿಂದ ಮೀನಿಗಳಿಗೆ ಬೇಡಿಕೆ ಇಲ್ಲವಾಗಿದೆ. ಇದರ ಪರಿಣಾಮವಾಗಿ ಬೊಂಡಾಸ್​ ಮೀನಿನ ದರ ಕೂಡ ಪಾತಾಳಕ್ಕೆ ಕುಸಿತ ಕಂಡಿದೆ. ಬೊಂಡಾಸ್​ ಮೀನಿನ ಬಂಪರ್​ ಸಿಕ್ಕರೂ ಅದರ ದರ ಕುಸಿದಿರುವುದರಿಂದ ಮೀನುಗಾರರಿಗೆ ಸಾಕಷು ನಷ್ಟ ಉಂಟಾಗಿದೆ. ಒಂದೆಡೆ ಡೀಸೆಲ್​ ಬೆಲೆ ಏರಿಕೆ, ಇನ್ನೊಂದು ಕಡೆ ಮೀನಿನ ದರ ಇಳಿಕೆಯಿಂದ ಮೀನುಗಾರಿಕೆಗೆ ಈ ಋತುವಿನ ಆರಂಭದಲ್ಲಿಯೇ ದೊಡ್ಡ ಹೊಡೆತ ಬಿದ್ದಿದೆ.

ಬೊಂಡಾಸ್​ ಮೀನಿನ ಫಸ್ಟ್​ ಗ್ರೆಡ್​ಗೆ ಕಳೆದ ಮಳೆಗಾಲದ ಇದೇ ಅವಧಿ ಯಲ್ಲಿ ಕೆ.ಜಿ. 400-500ರೂ. ದರ ಇತ್ತು. ಆದರೆ ಇವತ್ತು ಅದರ ದರ ಕೆ.ಜಿ.ಗೆ 90ರೂ. ಆಗಿದೆ. ಅದೇ ರೀತಿ ಸೆಕೆಂಡ್​ ಗೆ 50 ರೂ. ಮತ್ತು ಥರ್ಡ್​ಗೆ ಕೆ.ಜಿ.ಗೆ 15 ರೂ. ಬಂದು ತಲುಪಿದೆ.