ಮಂಡ್ಯ: ಸಾಧಕರನ್ನು ಗೌರವಿಸುವುದು ಮತ್ತು ಸ್ಮರಿಸುವುದು ಶ್ರೇಷ್ಟ ಕೆಲಸ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಸಂಘದಿಂದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಜಿ.ಎಸ್. ಬೊಮ್ಮೇಗೌಡ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ನಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ಅರ್ಥಮಾಡಿಕೊಂಡು ಅದಕ್ಕೊಂದು ರೂಪು ಕೊಡುವ ಕೆಲಸವನ್ನು ಸಂಸ್ಕಾರ ಎನ್ನುತ್ತಾರೆ. ಹಾಗೆ ಮಾಡುವವರ ಸಂಸ್ಕಾರವಂತಾದರೆ ಅದನ್ನು ಬೆಳೆಸಿಕೊಳ್ಳುವವರಲ್ಲಿ ನಮ್ಮಲ್ಲಿ ಸಂಸ್ಕೃತಿ ರೂಪಗೊಳ್ಳುತ್ತದೆ ಎಂದರು.
ಹಳೆ ಮೈಸೂರು ಭಾಗದಲ್ಲಿ ಮಂಡ್ಯ ಜಿಲ್ಲೆಯಲ್ಲಿದ್ದಂತಹ ನಾಯಕತ್ವ ಯಾವ ಜಿಲ್ಲೆಗೂ ಇರಲಿಲ್ಲ. ಹಾಸನ, ಕೋಲಾರ, ತುಮಕೂರಿನಲ್ಲಿ ಮಂಡ್ಯದಂತಹ ನಾಯಕತ್ವ ಇರಲಿಲ್ಲ. ಹೆಚ್ಚಿನ ಮೌಲ್ಯ ಗುಣಾಧಾರಿತ ರಾಜಕಾರಣ ಇತ್ತು. ಯಾರು ನಿಜವಾಗಿ ಸೇವೆ ಮಾಡುತ್ತಿದ್ದವರೋ ಅವರು ಜನನಾಯಕರು ಜನಸೇವಕರು ಆಗಿದ್ದರು. ಯಾವುದೇ ಕೌಟುಂಬಿಕ ಹಿನ್ನೆಲೆ ಇಲ್ಲದೇ ಜನರ ಮಧ್ಯದಲ್ಲಿ ತಾವೇ ತಾವಾಗಿ ಬೆಳಕಿಗೆ ಬಂದು ವ್ಯಕ್ತಿಯಾಗಿ ಶಕ್ತಿಯಾಗಿ ರೂಪುಗೊಂಡದ್ದು ಈ ಜಿಲ್ಲೆಯಲ್ಲಿ ಮಾತ್ರ. ಅಂದಿನ ನಾಯಕರನ್ನು ಸ್ಮರಣೆ ಮಾಡಬೇಕು. ಅಂತಹ ನಾಯಕತ್ವ ಗುಣ ಎಲ್ಲರಲ್ಲಿ ಬರಬೇಕು. ಜಿ.ಎಸ್.ಬೊಮ್ಮೇಗೌಡ ಅವರು ಕೆ.ವಿ.ಶಂಕರಗೌಡರ ಜತೆ ರಾಜಕೀಯ ರೂವಾರಿಯಾಗಿ ಬೆಳೆದಿದ್ದಾರೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಮಂಡ್ಯ ಎಂದರೆ ಇಂಡಿಯಾ ಎನ್ನುವ ಮಾತಿನಂತೆ ಜಿ.ಎಸ್.ಬೊಮ್ಮೇಗೌಡ ಅವರು ಶಂಕರಗೌಡರ ನೇತೃತ್ವದಲ್ಲಿ ಮಂಡ್ಯವನ್ನು ಅಭಿವೃದ್ಧಿ ಪಥದಲ್ಲಿ ಕಟ್ಟಿ ಬೆಳೆಸಿದ ಹಿರಿಯರಾಗಿದ್ದಾರೆ. ಅಂದಿನ ನಾಯಕರು ಇಡೀ ರಾಷ್ಟ್ರ ತಿರುಗಿ ನೋಡುವಂತೆ ಜಿಲ್ಲೆಯ ಪ್ರಭಾವ ಇಟ್ಟುಕೊಂಡಿದ್ದರು. ಅವರು ಬೆಳೆದು ಬಂದ ದಾರಿಯಲ್ಲಿ ಯುವ ರಾಜಕಾರಣಿಗಳು ನಡೆಯಬೇಕು. ಅಂತೆಯೇ ಅವರು ಹಾಕಿಕೊಟ್ಟ ತತ್ವ ಸಿದ್ಧಾಂತಗಳ ಮೇಲೆ ಸಮಗ್ರವಾಗಿ ಜಿಲ್ಲೆಯನ್ನು ಅಭಿವೃದ್ಧಿ ಮಾಡುವುದು ನಮ್ಮ ಕರ್ತವ್ಯ ಎಂದು ಭಾವಿಸುತ್ತೇನೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಭಿನಂದನಾ ನುಡಿಗಳನ್ನಾಡಿದರು. ಮಾಜಿ ಶಾಸಕ ಹಾಗೂ ದತ್ತಿದಾನಿ ಜಿ.ಬಿ.ಶಿವಕುಮಾರ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಮಂಜುಳಾ ಉದಯಶಂಕರ್, ಕೋಣನಹಳ್ಳಿ ಜಯರಾಮು ಇತರರಿದ್ದರು. ಇದೇ ವೇಳೆ ಮೈಸೂರು ಮುಡಾ ಮಾಜಿ ಅಧ್ಯಕ್ಷ ಡಿ.ಮಾದೇಗೌಡ ಅವರಿಗೆ ಜಿ.ಎಸ್.ಬೊಮ್ಮೇಗೌಡ ಸಮಾಜ ಸೇವಾ ಪ್ರಶಸ್ತಿಯನ್ನು 25000 ರೂ ನಗದು ಪ್ರಶಸ್ತಿ ಫಲಕದೊಂದಿಗೆ ಪ್ರದಾನ ಮಾಡಲಾಯಿತು.