ಜಿಲ್ಲೆ

ಮದುವೆ ಆಗುವಂತೆ ಪೀಡಿಸುತ್ತಿದ್ದ ಯುವಕ, ವಿಷ ಸೇವಿಸಿದ್ದ ಯುವತಿ ಸಾವು

ಶಿವಮೊಗ್ಗ: ಮದುವೆ ಆಗುವಂತೆ ಒತ್ತಾಯ ಮಾಡಿದ್ದಲ್ಲದೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರಿಂದ ವಿಷ ಸೇವಿಸಿದ್ದ ಯುವತಿಯೊಬ್ಬಳು ಚಿಕಿತ್ಸೆ ಫಲಿಸದೇ ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಬೊಮ್ಮನಕಟ್ಟೆ ಬಿ ಬ್ಲಾಕ್‌ನ ಸುಮಾ (22) ಮೃತ ಯುವತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಕಂಕನಹಳ್ಳಿಯ ಪ್ರವೀಣ್, ಆತನ ತಂದೆ ಚಂದ್ರನಾಯ್ಕ, ತಾಯಿ ಮಂಜುಳಾಬಾಯಿ, ಸಹೋದರ ಪೃಥ್ವಿ, ಸಹೋದರಿ ಸಂಧ್ಯಾ ಅವರ ಮೇಲೆ ವಿನೋಬನಗರ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ದೂರು ದಾಖಲಾಗಿದೆ.

ಏನಿದು ಪ್ರಕರಣ ?

ಕಂಕನಹಳ್ಳಿಯ ನಿರ್ಮಲಾಬಾಯಿ ಅವರು ಮಕ್ಕಳಿಲ್ಲದ ಕಾರಣ ಸಹೋದರಿ ಗಂಗೂಬಾಯಿ ಅವರ ಪುತ್ರಿ ಸುಮಾ ಅವರನ್ನು ಸಾಕಿಕೊಂಡಿದ್ದರು. ಗಂಡ ಸುರೇಶ್ ನಾಯ್ಕ ಅವರು ಮೃತಪಟ್ಟ ಬಳಿಕ 15 ವರ್ಷಗಳಿಂದ ಶಿವಮೊಗ್ಗದ ಬೊಮ್ಮನಕಟ್ಟೆಯ ಬಿ ಬ್ಲಾಕ್‌ನಲ್ಲಿ ಬಾಡಿಗೆ ಮನೆಯಲ್ಲಿ ನಿರ್ಮಲಾಬಾಯಿ ಮತ್ತು ಸುಮಾ ವಾಸವಾಗಿದ್ದರು. ಸುಮಾಳಿಗೆ ಎರಡು ವರ್ಷದ ಹಿಂದೆಯೇ ಮದುವೆ ಪ್ರಸ್ತಾಪ ಬಂದಿತ್ತು. ಮನೆಯವರೆಲ್ಲ ಸೇರಿಕೊಂಡು ಕಂಕನಹಳ್ಳಿಯ ಪ್ರವೀಣ್ ಜತೆ ಮದುವೆ ಮಾಡಲು ಮುಂದಾಗಿದ್ದರು. ಆದರೆ ಎಂಸಿಎ ಮಾಡುವ ಕನಸು ಕಟ್ಟಿಕೊಂಡಿದ್ದ ಸುಮಾ ಎರಡು ವರ್ಷ ಮದುವೆ ಮುಂದೂಡಿದ್ದಳು. ಈ ನಡುವೆ ಪ್ರವೀಣ್ ತನ್ನನ್ನು ಮದುವೆ ಆಗುವಂತೆ ಫೋನ್‌ನಲ್ಲಿ ಒತ್ತಾಯ ಮಾಡುತ್ತಿದ್ದಲ್ಲದೆ, ಕಾಲೇಜು, ಬಸ್ ನಿಲ್ದಾಣದ ಬಳಿ ಬಂದು ಪೀಡಿಸುತ್ತಿದ್ದ ಎನ್ನಲಾಗಿದೆ.

ಮನೆ ಬಂದು ನಿಂದನೆ, ಪ್ರಚೋದನೆ:

ಮದುವೆ ಮುಂದೂಡುತ್ತಿದ್ದ ಸುಮಾಳ ವರ್ತನೆಯಿಂದ ಕಂಗೆಟ್ಟ ಪ್ರವೀಣ್ ಕುಟುಂಬದವರು ಫೆ.9ರಂದು ಸುಮಾಳ ಮನೆಗೆ ಬಂದಿದ್ದರು. ಈ ವೇಳೆ ಮದುವೆ ಮಾಡಿಕೊಳ್ಳುವಂತೆ ಒತ್ತಡ ಹಾಕಿದ್ದರು. ಆದರೆ ಎಂಸಿಎ ಮುಗಿಯುವವರೆಗೆ ಮದುವೆ ಆಗುವುದಿಲ್ಲ ಎಂದು ಸುಮಾ ಪಟ್ಟು ಹಿಡಿದ್ದಳು. ಇದರಿಂದ ಸಿಟ್ಟಿಗೆದ್ದ ಪ್ರವೀಣ್ ಕುಟುಂಬದವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರು ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ನೋಂದ ಸುಮಾ ಅದೇ ದಿನ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ತಕ್ಷಣವೇ ಆಕೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸುಮಾ ಮೃತಪಟ್ಟಿದ್ದಾಳೆ.