ವೀರನಹೊಸಹಳ್ಳಿ ಅರಣ್ಯವ್ಯಾಪ್ತಿಯ ಬೊಮ್ಮಲಾಪುರ ಹಾಡಿಯಲ್ಲಿನ ಮನೆ ಮತ್ತು ರಸ್ತೆ ಸ್ಥಿತಿ. 
ಜಿಲ್ಲೆ

ಬೊಮ್ಮಲಾಪುರ ಹಾಡಿಗಿಲ್ಲ ಮೂಲ ಸೌಕರ್ಯ

ಅಭಿನಯ್ ಎಚ್.ಎಂ

ಎಚ್.ಡಿ.ಕೋಟೆ: ತಂತ್ರಜ್ಞಾನ ಮುಂದುವರಿದಂತೆ, ಭೂಮಿಯಿಂದ ಚಂದ್ರ ಲೋಕಕ್ಕೆ ಪಯಣ ಬೆಳೆದಂತೆ ಎಷ್ಟೆಲ್ಲ ಸಾಧನೆ ಮಾಡಿದರೂ ಮನುಷ್ಯ ಮಾತ್ರ ತನಗೆ ಬಳುವಳಿಯಾಗಿ ಬಂದ ಗುಣಗಳನ್ನು ಮಾತ್ರ ಬಿಟ್ಟಿಲ್ಲ.ಇತರರು ತನ್ನಂತೆ ಬದುಕಬೇಕು, ಬಾಳ ಬೇಕು ಎಂದು ಅನಿಸಿದರೂ ಅದಕ್ಕೆ ಅವಕಾಶ ನೀಡದೆ ಕತ್ತಲ ಜಗತ್ತಿನಲ್ಲಿ ಜೀವಿಸುವಂತೆ ಮಾಡಲಾಗಿದೆ. ನಾಗರಿಕ ಸಮಾಜಕ್ಕೆ ಸಿಗಬೇಕಾದ ಹಕ್ಕನ್ನು ಕಸಿದುಕೊಳ್ಳುವ ಮೂಲಕ ಆದಿಮಾನವರ ರೀತಿ ಬದುಕಬೇಕಾದ ಅನಿವಾರ್ಯತೆ ಇದೇ ಎಂದರೆ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಯೋಚಿಸುವ ಅನಿವಾರ್ಯತೆ ಎದುರಾಗಿದೆ.

ಮನುಷ್ಯ ಜೀವಿಸಬೇಕಾದರೆ ಕನಿಷ್ಠ ಮೂಲ ಸೌಕರ್ಯ ಅಗತ್ಯ. ಆದರೆ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದ್ದರೂ ಆಡಳಿತ ಯಂತ್ರ ಮೌನ ವಹಿಸದೆ ಎಂದರೆ ದೇಶ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುವುದು ಸಹಜ. ತಾಲೂಕಿನ ಕೇಂದ್ರ ಸ್ಥಾನದಿಂದ 10 ಕಿ.ಮೀ ದೂರದಲ್ಲಿರುವ ಬೊಮ್ಮಲಪುರ ಹಾಡಿಯಲ್ಲಿ ವಾಸ ಮಾಡುತ್ತಿರುವ ಜೇನು ಕುರುಬ ಜನಾಂಗದ ಜನರಿಗೆ ಇಂದಿಗೂ ಕೂಡ ವಾಸಿಸಲು ಯೋಗ್ಯವಾದ ಮನೆ, ರಸ್ತೆ, ಚರಂಡಿ, ಸಂಪರ್ಕ ರಸ್ತೆ ಇಲ್ಲ. ಈ ನಡುವೆ ಮನೆ ಕಟ್ಟಲು ಅರಣ್ಯ ಇಲಾಖೆ ಬಿಡುತ್ತಿಲ್ಲ. ತುಂಡು ಭೂಮಿಯಂತೂ ಇಲ್ಲವೇ ಇಲ್ಲ. ವಾಸ ಮಾಡುತ್ತಿರುವ ಜಾಗಕ್ಕೆ ಹಕ್ಕು ಪತ್ರ ದೊರೆತಿಲ್ಲ. ಕೂಲಿ ಮಾಡಿದರೆ ಜೀವನ..ಇಲ್ಲ ಉಪವಾಸ ಎಂಬಂತಾಗಿದ್ದು, ವನವಾಸಿಗಳ ಕಷ್ಟ ಕೇಳುವವರು ಯಾರೂ ಇಲ್ಲದಂತಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಸೇರಿದ ವೀರನಹೊಸಹಳ್ಳಿ ಅರಣ್ಯವ್ಯಾಪ್ತಿಯ ಬೊಮ್ಮಲಾಪುರ ಹಾಡಿ ಜನರು ತಮ್ಮ ಪೂರ್ವಜರ ಕಾಲದಿಂದಲೂ ಅರಣ್ಯದೊಳಗೆ ವಾಸ ಮಾಡುತ್ತಿದ್ದಾರೆ. ಕಾಡಿನಲ್ಲಿ ಸಿಗುವ ಗಡ್ಡೆಗೆಣಸು ತಿಂದು ಬದುಕು ದೂಡುತ್ತಿರುವ ಈ ಜನರನ್ನು ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದ ನಂತರ ಕಾಡಿನಿಂದ ಇಲಾಖೆ ಒಕ್ಕಲೆಬ್ಬಿಸಿ ಅರಣ್ಯದಂಚಿನಲ್ಲಿ ತಂದು ಕೂರಿಸಿದೆ. 15 ವರ್ಷಗಳ ಹಿಂದೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಿಸಿಡಿ ಯೋಜನೆಯಡಿ ಕೆಲವರಿಗೆ ವಾಸಿಸಲು ಜಾಗ ನೀಡಿತ್ತು. ಇದರೊಂದಿಗೆ ಹಾಡಿಗೆ ರಸ್ತೆ, ಚರಂಡಿಯನ್ನೂ ನಿರ್ಮಿಸಿತ್ತು. ಆ ಸಂದರ್ಭದಲ್ಲಿ ಅರಣ್ಯ ಇಲಾಖೆ ಯಾವುದೇ ತೊಂದರೆ ಕೊಟ್ಟಿರಲಿಲ್ಲ. ನಂತರದ ದಿನಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಈ ಜಾಗ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸೇರಿದ್ದು ಎಂದು ಹಾಡಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಬಿಡದೆ ತೊಂದರೆ ಕೊಡಲು ಪ್ರಾರಂಭಿಸಿತು.ಇದರ ಪರಿಣಾಮ ಆದಿವಾಸಿ ಜನಾಂಗದ ಮುಖಂಡರು ಹಾಗೂ ಪರಿಶಿಷ್ಟ ವರ್ಗಗಳ ಇಲಾಖೆ ಈ ಜನರಿಗೆ ಸಹಾಯಕ್ಕೆ ನಿಂತ ನಂತರ ಸಾಮೂಹಿಕ ಹಾಗೂ ವೈಯಕ್ತಿಕ ಹಕ್ಕಿನಡಿ ಹಾಡಿಯಲ್ಲಿ ವಾಸ ಮಾಡುತ್ತಿರುವ ಎಲ್ಲರಿಗೂ ಹಕ್ಕು ಪತ್ರ ಕೊಡಿಸಲು ಮುಂದಾಗಿ ಸರ್ವೇ ಮಾಡಿಸಲಾಯಿತಾದರೂ ಕೆಲಸ ಪ್ರಗತಿ ಕಂಡಿಲ್ಲ.

ವರ್ಷದ ಹಿಂದೆ ಪರಿಶಿಷ್ಟ ವರ್ಗಗಳ ಇಲಾಖೆಯಿಂದ ಹಾಡಿಯ 8 ಜನರಿಗೆ 3.75 ಲಕ್ಷ ರೂ.ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲು ಮುಂದಾದಾಗ ಅರಣ್ಯ ಇಲಾಖೆ ಅಧಿಕಾರಿಗಳು ಮನೆ ಕಟ್ಟಲು ತಡೆ ಒಡ್ಡಿದರು. ಇದರಿಂದ ಕಾಡಿನ ಜನರು ಮನೆ ಇಲ್ಲದೆ ಅವರಿವರ ಮನೆಯ ಜೋಪಡಿ ಮೇಲೆ ಕಾಲ ಕಳೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.ಈ ನಡುವೆ ಹಲವರು ಕಾಡು ಪ್ರಾಣಿಗಳ ಬಾಯಿಗೆ ತುತ್ತಾದರು. ಇಷ್ಟೆಲ್ಲ ಆದರೂ ಕೂಡ ಆಡಳಿತ ಯಂತ್ರ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ಈ ಜನರಿಗೆ ಮೂಲ ಹಕ್ಕುಗಳನ್ನು ನೀಡುವಲ್ಲಿ ವಿಫಲವಾಗಿದೆ. ಈ ಬಗ್ಗೆ ಲೌಡ್ ಸ್ಪೀಕರ್‌ನಲ್ಲಿ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈವರೆಗೂ ಪುನರ್ವಸತಿ ಕಲ್ಪಿಸಿಲ್ಲ
ಅರಣ್ಯದೊಳಗೆ ಇದ್ದ ನಮ್ಮನ್ನು ಪುನರ್ವಸತಿ ನೆಪದಲ್ಲಿ ಅಲ್ಲಿಂದ ಹೊರಗೆ ತಂದರು. ಆದರೆ ಇದುವರೆಗೂ ನಮಗೆ ಪುನರ್ವಸತಿ ಕಲ್ಪಿಸಿಲ್ಲ. ಇದರಿಂದ ಜೀವನ ನಡೆಸಲು ಕಷ್ಟವಾಗಿದೆ. ಅಲ್ಲದೆ ಮುಂದೇನು ಎಂಬ ಚಿಂತೆ ಕಾಡತಿಡಗಿದೆ. ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ಇಲ್ಲೂ ನೆಲೆ ನಿಲ್ಲಲು ಅರಣ್ಯ ಇಲಾಖೆ ಅಧಿಕಾರಿಗಳು ಬಿಡುತ್ತಿಲ್ಲ.
ದೇವಿ ಕಾಳಪ್ಪ ಬೊಮ್ಮಲಾಪುರ ಹಾಡಿ ನಿವಾಸಿ

ಮುಗಿದಿದೆ ಸರ್ವೇ ಕಾರ್ಯ
ಈಗಾಗಲೇ ನಮ್ಮ ಸಂಘಟನೆ ವತಿಯಿಂದ ಈ ಹಾಡಿ ಜನರಿಗೆ ಸಾಮೂಹಿಕ ಹಕ್ಕು ಹಾಗೂ ವೈಯಕ್ತಿಕ ಹಕ್ಕು ಪತ್ರ ಕೊಡಿಸಲು ನಮೂನೆ ಎ.ಬಿ ಮತ್ತು ಸಿ ಅರ್ಜಿ ಹಾಕಿಸಲಾಗಿದೆ. ಸರ್ವೇ ಕಾರ್ಯ ಮುಗಿದಿದೆ ಹಕ್ಕು ಪತ್ರ ಕೊಡಬೇಕು.
ವಿಜಯಕುಮಾರ್ ಆದಿವಾಸಿ ಮುಖಂಡ, ಬಸವನಗಿರಿ ಹಾಡಿ

ವೈಯಕ್ತಿಕ ಹಕ್ಕು ನೀಡಲು ತಕರಾರು
ಸಾಮೂಹಿಕ ಹಕ್ಕು ಪತ್ರ ಕೊಡಲು, ಅನುಮತಿ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳಿಂದ ತಕರಾರು ಇಲ್ಲ. ಆದರೆ ವೈಯಕ್ತಿಕ ಹಕ್ಕು ಪತ್ರ ನೀಡಲು ತೊಂದರೆ ಮಾಡುತ್ತಿದ್ದಾರೆ. ಇದರಿಂದ ನಮಗೆ ಜೀವಿಸುವ ಹಕ್ಕು ಕಸಿದುಕೊಂಡಂತಾಗಿದ್ದು, ಸಂಬಂಧಪಟ್ಟವರು ಇತ್ತಗಮಹರಿಸಿ ಕ್ರಮ ವಹಸಿಬೇಕು.
ನಾಗರಾಜು ಆದಿವಾಸಿ ಮುಖಂಡ, ಯಶವಂತಪುರ

ಯಾರಿಗೂ ತುಂಡು ಭೂಮಿ ಇಲ್ಲ
ಹಾಡಿಯಲ್ಲಿ ವಾಸ ಮಾಡುತ್ತಿರುವ ಯಾರಿಗೂ ತುಂಡು ಭೂಮಿ ಇಲ್ಲ. ಮನೆ ಕಟ್ಟಿರುವ ಜಾಗಕ್ಕೂ ಕೂಡ ಹಕ್ಕು ಪತ್ರ ಕೊಡಲು ಅರಣ್ಯ ಇಲಾಖೆ ತೊಂದರೆ ನೀಡುತ್ತಿದೆ. ನಮಗೆ ಜೀವಿಸುವ ಹಕ್ಕನ್ನು ಕೂಡ ಸಮಾಜ ಕಸಿದುಕೊಂಡಿದೆ. ಇದರಿಂದ ಸಂಕಷ್ಟ ಎದುರಾಗಿದ್ದು, ದಿಕ್ಕು ತೋಚದಂತಾಗಿದೆ.
ತಮ್ಮಯ್ಯ ಬೊಮ್ಮಲಾಪುರ ಹಾಡಿ ನಿವಾಸಿ

ಉದ್ದೇಶ ಪೂರ್ವಕವಾಗಿ ತೊಂದರೆ
2006ರ ಅರಣ್ಯ ಹಕ್ಕು ಕಾಯ್ದೆಯಡಿ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಅರಣ್ಯದಲ್ಲಿ ವಾಸ ಮಾಡುವ ಆದಿವಾಸಿಗಳಿಗೆ ಮನೆ, ನೀರು, ದೀಪ ಸೇರಿದಂತೆ ಮೂಲ ಸೌಕರ್ಯ ಒದಗಿಸಬೇಕು. ಅಲ್ಲದೆ ತೊಂದರೆ ನೀಡುವಂತ್ತಿಲ್ಲ ಎಂಬ ಆದೇಶ ಇದ್ದರೂ ಕೂಡ ಅರಣ್ಯ ಇಲಾಖೆಯವರು ಉದ್ದೇಶಪೂರ್ವಕವಾಗಿ ತೊಂದರೆ ನೀಡುತ್ತಿದ್ದಾರೆ.
ಚಿಕ್ಕಣ್ಣ ಜೇನುಕುರುಬ ಜನಾಂಗದ ಮುಖಂಡ, ವಡ್ಡರಗುಡಿ, ಶಿವರಾಜು ಆದಿವಾಸಿ ಮುಖಂಡ ಅಂಕನಾಥಪುರ ಹಾಡಿ

ಸರ್ವಾಧಿಕಾರಿ ಧೋರಣೆ ಬಿಡಲಿ
ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಗೊಳಿಸಲು ಅರಣ್ಯ ಇಲಾಖೆಯವರು ಬಿಡುತ್ತಿಲ್ಲ. ಈಗಾಗಲೇ ಬೊಮ್ಮಲಾಪುರ ಹಾಡಿಯಲ್ಲಿ ಮನೆ ನಿರ್ಮಾಣ ಆಗಿದೆ. ಆ ಸಂದರ್ಭದಲ್ಲಿ ತೊಂದರೆ ನೀಡದ ಅರಣ್ಯ ಇಲಾಖೆ ಅಧಿಕಾರಿಗಳು ಈಗ ಉದ್ದೇಶ ಪೂರ್ವಕವಾಗಿ ತೊಂದರೆ ಕೊಡುತ್ತಿದ್ದಾರೆ. ಅರಣ್ಯ ಇಲಾಖೆಗೆ ಸೇರಿದ ಜಾಗಕ್ಕೆ ಹಾಡಿ ಜಾಗವನ್ನು ಬಿಟ್ಟು ಈಗಾಗಲೇ ಕಂದಕ ನಿರ್ಮಾಣ ಮಾಡಿದ್ದಾರೆ. ಆದರೂ ಕೂಡ ಮೂಲ ಸೌಕರ್ಯ ಒದಗಿಸಲು ಬಿಡುತ್ತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಸರ್ವಾಧಿಕಾರಿ ಧೋರಣೆ ಬಿಡಬೇಕು.
ಪುಟ್ಟಬಸವಯ್ಯ ತಾಲೂಕು ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ, ವಡ್ಡರಗುಡಿ ಹಾಡಿ

ಬೊಮ್ಮಲಪುರ ಹಾಡಿಯಲ್ಲಿ ಹೊಸದಾಗಿ ಮನೆ ಕಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ ಎಂಬ ಮಾಹಿತಿ ನನಗೆ ಗೊತ್ತಿಲ್ಲ. ಈ ಬಗ್ಗೆ ಸ್ಥಳೀಯ ವಲಯ ಅರಣ್ಯ ಅಧಿಕಾರಿಗಳಿಂದ ಮಾಹಿತಿ ಪಡೆದು ಯಾವ ರೀತಿ ಕ್ರಮ ವಹಿಸಬೇಕು ಎಂಬುದರ ಕುರಿತು ಅಗತ್ಯ ಸೂಚನೆ ನೀಡಲಾಗುವುದು.
ದಯಾನಂದ್ ಎಸಿಎಫ್ ವೀರನಹೊಸಹಳ್ಳಿ ಅರಣ್ಯ ವಲಯ

ಪಂಚಾಯಿತಿ ವತಿಯಿಂದ ಜಲಜೀವನ್ ಮಿಷನ್ ಅಡಿಯಲ್ಲಿ ಪ್ರತಿ ಮನೆಗೆ ಕುಡಿಯುವ ನೀರು ಸಂಪರ್ಕ ಸಂಪರ್ಕ ಒದಗಿಸುವ ಸಂಬಂಧ ಕಾಮಗಾರಿ ಮಾಡಲು ಅರಣ್ಯ ಇಲಾಖೆ ಬಿಡುತ್ತಿಲ್ಲ. ಕೇಳಿದರೆ ಆದಿವಾಸಿಗಳು ವೈಯಕ್ತಿಕ ಹಕ್ಕು ಪತ್ರ ಪಡೆದ ನಂತರ ಕಾಮಗಾರಿ ಪ್ರಾರಂಭಿಸಿ ಎಂದು ಹೇಳುತ್ತಾರೆ. ಇದರಿಂದ ಜನರಿಗೆ ಕುಡಿಯುವ ನೀರಿಗೆ ತೊಂದರೆ ಆಗಿದೆ.
ರವಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಚಕ್ಕೋಡನಹಳ್ಳಿ ಗ್ರಾಮ ಪಂಚಾಯತಿ

ಅರಣ್ಯ ಇಲಾಖೆಯವರು ಜವಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ಜಂಟಿ ಸರ್ವೇ ಮಾಡಲು ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ಕರೆದರೆ ಅರಣ್ಯ ಇಲಾಖೆ ಅಧಿಕಾರಿಗಳು ಸಭೆಗೆ ಗೈರಾಗುತ್ತಿದ್ದಾರೆ. ಇದರಿಂದ ಆದಿವಾಸಿಗಳಿಗೆ ಸೌಲಭ್ಯಗಳನ್ನು ನೀಡಲು ತೊಂದರೆ ಆಗುತ್ತಿದೆ.
ಮಹೇಶ್ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ