ಚನ್ನಪಟ್ಟಣ: ನಾವು ರಣಧೀರರಂತೆ ಹೋರಾಟ ಮಾಡುತ್ತೇವೆಯೇ ಹೊರತು ರಣಹೇಡಿಗಳಲ್ಲ ಎನ್ನುವ ಮೂಲಕ ಕಾಂಗ್ರೆಸ್ ನಾಯಕರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಿಸಿ ಮುಟ್ಟಿಸಿದರು.
ತಾಲೂಕಿನ ಕೂಡ್ಲೂರು ರಸ್ತೆಯಲ್ಲಿರುವ ಶಿಶಿರಾ ರೆಸಾರ್ಟ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆಯಲ್ಲಿ ಮಾತನಾಡಿ, ದೇವೇಗೌಡರ ಕುಟುಂಬ ಯಾವತ್ತೂ ಚುನಾವಣೆಗೆ ಹೆದರಿ ಓಡಿಹೋಗಿಲ್ಲ. ನಮ್ಮ ಇಡೀ ಕುಟುಂಬ ರಣಧೀರರಂತೆ ಹೋರಾಟ ಮಾಡಿದ್ದೇವೆ. ಕಳೆದ ಉಪಚುನಾವಣೆಯಲ್ಲೂ ನಿಖಿಲ್ ರಣಧೀರನಂತೆ ಹೋರಾಟ ಮಾಡಿದ್ದಾನೆ. ಈ ಚುನಾವಣೆಯಲ್ಲಿ ಆತ ಸೋಲನ್ನು ಅನುಭವಿಸಿರಬಹುದು. ಆದರೆ, ಅವನು ಎಂದೆಂದಿಗೂ ನಿಮ್ಮೊಂದಿಗೆ ನಿಲ್ಲುತ್ತಾನೆ. ನಿಮ್ಮ ಮನೆ ಮಗನ ರೀತಿಯಲ್ಲಿ ಇರುತ್ತಾನೆ ಎಂದರು.
ಸೋಲಿಗೆ ನಾವೇ ಕಾರಣ: ನಾನು ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗಿದ್ದೆ. ನಿಖಿಲ್ ಜತೆ ಮಾತನಾಡಿ, ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಬೇಕು ಎಂದಿದ್ದೆ. ಇಂದು ಇಷ್ಟೊಂದು ದೊಡ್ಡಮಟ್ಟದಲ್ಲಿ ಕಾರ್ಯಕರ್ತರು ಸೇರಿದ್ದೀರಿ. ಕಾರ್ಯಕರ್ತರು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ ಎಂದ ಅವರು, ಈ ಸಭೆ ಮೂಲಕ ಕಾಂಗ್ರೆಸ್ ನಾಯಕರಿಗೆ ನಮ್ಮ ಚನ್ನಪಟ್ಟಣ ಕಾರ್ಯಕರ್ತರು ಸಂದೇಶ ಕೊಟ್ಟಿದ್ದಾರೆ. ಈ ಸೋಲಿನ ನೈತಿಕ ಹೊಣೆಯನ್ನು ನಮ್ಮ ಪಕ್ಷದ ತಾಲೂಕು ಅಧ್ಯಕ್ಷ ಜಯಮುತ್ತು ಹೊರುತ್ತೇನೆ ಎಂದಿದ್ದಾರೆ. ಆದರೆ, ಇದು ಜಯಮುತ್ತು ಅಥವಾ ಕಾರ್ಯಕರ್ತರಿಂದ ಆದ ಸೋಲಲ್ಲ. ಈ ಸೋಲಿನ ಜವಾಬ್ದಾರಿಯನ್ನು ನಾನು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತೇನೆ. ನಾವು ಮಾಡಿದ ಕೆಲ ವಿಳಂಬದ ನಿರ್ಧಾರವೂ ಸೋಲಿಗೆ ಕಾರಣ ಎಂದು ವಿಷಾದ ವ್ಯಕ್ತಪಡಿಸಿದರು.
ನಿಖಿಲ್ ಸ್ಪರ್ಧೆ ಅನಿರೀಕ್ಷಿತ: ದೇವೇಗೌಡರು ರಾಜಕಾರಣದಲ್ಲಿ ಏನಾದರೂ ಉಳಿದಿದ್ದರೆ ಅಥವಾ ಈ ಕುಟುಂಬಕ್ಕೆ ರಕ್ಷಣೆ ಇದ್ದರೆ ಅದು ದೇವರ ಅನುಗ್ರಹದಿಂದ. ದೇವೇಗೌಡರ ಕುಟುಂಬಕ್ಕೆ ದೇವರ ಅನುಗ್ರಹ ಇದೆ. ವಿರೋಧ ಪಕ್ಷಗಳು ನಮ್ಮನ್ನು ಟೂರಿಂಗ್ ಟಾಕೀಸ್ ಎನ್ನುತ್ತಾರೆ. ಆದರೆ, ರಾಜ್ಯದಲ್ಲಿ ಯಾವುದೇ ಕಡೆ ನಿಂತು ಗೆದ್ದು ಬರೋ ಶಕ್ತಿ ಇದ್ದರೆ ಅದು ದೇವೇಗೌಡರ ಕುಟುಂಬಕ್ಕೆ ಮಾತ್ರ. ಈ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆ ಅನಿರೀಕ್ಷಿತ. ಅವರನ್ನೇ ನಿಲ್ಲಿಸಬೇಕು ಎಂದುಕೊಂಡಿದ್ದರೆ, ನಾನು ಕ್ಷೇತ್ರದಿಂದ ಹೋದಾಗಲೇ ನಿಖಿಲ್ಗೆ ವೇದಿಕೆ ಸಿದ್ಧ ಮಾಡುತ್ತಿದ್ದೆ. ಆದರೆ, ಅನಿವಾರ್ಯ ಕಾರಣಗಳಿಂದ ಆತ ಪಕ್ಷಕ್ಕೋಸ್ಕರ ತಲೆಕೊಟ್ಟ. ಆತನನ್ನು ದೊಡ್ಡಮಟ್ಟದಲ್ಲಿ ಎರಡು ಪಕ್ಷದ ಕಾರ್ಯಕರ್ತರು ಬೆಂಬಲಿಸಿದ್ದೀರಿ. ಎಲ್ಲರಿಗೂ ಕೋಟಿ ಕೋಟಿ ವಂದನೆ ಸಲ್ಲಿಸುತ್ತೇನೆ ಎಂದರು.
ಈ ಚುನಾವಣೆ ಗೆಲುವನ್ನು ತಲೆಗೇರಿಸಿಕೊಂಡು ನಮ್ಮ ಪಕ್ಷ ಹಾಗೂ ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರು ಹಾಗೂ ಇಲ್ಲಿನ ಅಭ್ಯರ್ಥಿಗೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ಉತ್ತರ ಕೊಡುತ್ತಾರೆ. ಇಲ್ಲಿನ ಮಹಾನಾಯಕರು, ದೇವೇಗೌಡರು ರಾಜಕೀಯ ಬಿಟ್ಟು ಮನೇಲಿ ಇರಲಿ ಎಂದಿದ್ದಾರೆ. ಕಾಂಗ್ರೆಸ್ ನಾಯಕರು ಮಣ್ಣಿನ ಮಕ್ಕಳು ರಾಜೀನಾಮೆ ಕೊಡಿ ಎನ್ನುತ್ತಾರೆ. ಕಾಂಗ್ರೆಸ್ ನಾಯಕರಿಗೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಬಗ್ಗೆ ಕನಸಿನಲ್ಲೂ ಭಯ ಇದೆ ಎಂದು ಛೇಡಿಸಿದರು.
ಸಿಎಂ ವಿರುದ್ಧ ಗರಂ!
ರಾಜ್ಯದ ಮುಖ್ಯಮಂತ್ರಿಗಳು ಹಾಸನದಲ್ಲಿ ಸಿದ್ದರಾಮೋತ್ಸವ ಮಾಡ್ತಿದ್ದಾರೆ.. ಯಾಕಪ್ಪ ಈ ಸಿದ್ದರಾಮೋತ್ಸವ. ಅಧಿಕಾರದಲ್ಲಿದ್ದು ಅಹಿಂದ ಸಮಾವೇಶ ಮಾಡಲು ಹೊರಟಿದ್ದೀರಿ. ರಾಜ್ಯದ ಜನಕ್ಕೆ ಯಾವ ಸಂದೇಶ ಕೊಡುತ್ತೀರಿ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ವಾಲ್ಮೀಕಿ ಆಯ್ತು, ಈಗ ಭೋವಿ ಹಗರಣ ಬರುತ್ತಿದೆ. ನಾಚಿಕೆ ಆಗಲ್ವ ನಿಮ್ಮ ಸರ್ಕಾರಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸಂವಿಧಾನ ಪುಸ್ತಕ ಹಿಡಿದು ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ. ನಿಮ್ಮ ಯೋಗ್ಯತೆಗೆ 17 ತಿಂಗಳಾಯ್ತು ಜಿಪಂ, ತಾಪಂ ಚುನಾವಣೆ ನಡೆಸಲು ಆಗಿಲ್ಲ. ಅಂಬೇಡ್ಕರ್ ಅವರ ಸಂವಿಧಾನ ಉಳಿಸುತ್ತೀರಾ ನೀವು? ಸಿದ್ದರಾಮಯ್ಯನವರೇ, ನಿಮ್ಮ ಸರ್ಕಾರ ಹಾಗೂ ಮಂತ್ರಿಗಳಿಗೆ ಮಾನಮರ್ಯಾದೆ ಇದೆಯಾ? ಗರ್ಭಿಣಿಯರು ಕಳಪೆ ಚಿಕಿತ್ಸೆಯಿಂದ ಸಾವನ್ನಪ್ಪಿದ್ದಾರೆ, ಯಾರಾದರೂ ಧ್ವನಿ ಎತ್ತಿದ್ದೀರಾ? ಎಂದು ಖಾರವಾಗಿ ತರಾಟೆಗೆ ತೆಗೆದುಕೊಂಡರು.
ಸಮುದಾಯದಿಂದ ತೆಗೆದು ಹಾಕಲು ಸಾಧ್ಯವಿಲ್ಲ!
ಈ ಕ್ಷೇತ್ರದಲ್ಲಿ ಒಕ್ಕಲಿಗರು ನಮಗೆ ಶಕ್ತಿ ತುಂಬಿದ್ದೀರಿ. ದೇವೇಗೌಡರ ಕುಟುಂಬವನ್ನು ಒಕ್ಕಲಿಗರಿಂದ ತೆಗೆದುಹಾಕಲು ಇನ್ನು 10 ಜನ್ಮ ಹೋದರೂ ಯಾರಿಂದಲೂ ಆಗಲ್ಲ. ಇವತ್ತು ದೇವೇಗೌಡರು ಪ್ರಧಾನಿ ಆಗಲು ಒಕ್ಕಲಿಗರು ಕಾರಣ. ನಾವು ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಕ್ಷೇತ್ರದಲ್ಲಿ ಈ ಮಟ್ಟಿಗೆ ಕೈ ಹಿಡಿದಿರುವುದು ಸಹ ಒಕ್ಕಲಿಗರೇ. ಆದರೆ, ನಾವು ಮುಸ್ಲಿಂ ಸಮಾಜಕ್ಕೆ ಏನು ಅನ್ಯಾಯ ಮಾಡಿದ್ದೇವೆ ಎಂಬುದೇ ಅರ್ಥವಾಗುತ್ತಿಲ್ಲ. ಆ ಸಮುದಾಯಕ್ಕೆ ನಾವು ನೀಡಿದಷ್ಟು ಯೋಜನೆಗಳನ್ನು ಯಾರೂ ನೀಡಿಲ್ಲ. ಆದರೂ, ಅವರ ತೀರ್ಮಾನಗಳು ಬೇಸರ ತಂದಿವೆ ಎಂದು ಎಚ್‌ಡಿಕೆ ತಿಳಿಸಿದರು.
ನಿಮ್ಮನ್ನು ಬಿಟ್ಟು ಹೋಗಲ್ಲ!
ಕುಮಾರಸ್ವಾಮಿ ಕುಟುಂಬ ನಿಮ್ಮನ್ನು ನಡುನೀರಲ್ಲಿ ಬಿಟ್ಟು ಹೋಗಲ್ಲ. ಮುಂದೆ ಯಾವ ಸಮಯದಲ್ಲಿ ಬೇಕಾದರೂ ಚುನಾವಣೆ ಬರಬಹುದು. ಸೋತ ನಿಖಿಲ್ ಮನೆಯಲ್ಲಿ ಕೂರಲ್ಲ, ಡಬಲ್ ಎಂಜಿನ್ ರೀತಿ ಕೆಲಸ ಪ್ರಾರಂಭ ಮಾಡುತ್ತಾನೆ. ಅವನೊಬ್ಬನೇ ನನಗೆ ಪಕ್ಷದ ಜೀವಾಳ. ಮುಂದೆ ರಾಜ್ಯದಲ್ಲಿ 170-180 ಸೀಟು ಬಿಜೆಪಿ - ಜೆಡಿಎಸ್ ಮೈತ್ರಿಗೆ ಬರಲಿದೆ. ಮುಂದೆ ಯಾವಾಗ ಬೇಕಾದರೂ ಚುನಾವಣೆ ಬರಬಹುದು. ಜಿಲ್ಲೆಯಲ್ಲಿ 4 ಸ್ಥಾನ ಜೆಡಿಎಸ್ ಗೆಲ್ಲಲಿದೆ. ಚನ್ನಪಟ್ಟಣದಲ್ಲಿ ಮತ್ತೆ 25 ಸಾವಿರ ಲೀಡ್‌ನಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.