mangalore court 
ಜಿಲ್ಲೆ

ಮಂಗಳೂರು ಕೋರ್ಟ್‌ ಆವರಣಕ್ಕೆ ಬಾಂಬ್‌ ಬೆದರಿಕೆ

ಪ್ರಮುಖ ಮುಖ್ಯಾಂಶಗಳು

  • ಜೆನ್‌ ಝಿ ಡಿಎಂಕೆ ಲೀಡರ್‌ ಎಂದು ಇ-ಮೇಲ್‌ ಸಂದೇಶ
  • ಕೆಮಿಕಲ್‌ ಬಾಂಬ್‌ ಇಟ್ಟು ಸ್ಪೋಟಿಸುವುದಾಗಿ ಬೆದರಿಕೆ
ಮಂಗಳೂರು: ಮಂಗಳೂರಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಬಾಂಬ್‌ ಬೆದರಿಕೆ ಇ-ಮೇಲ್‌ ಸಂದೇಶ ಬಂದಿದ್ದು, ಬಾಂಬ್‌ ಪತ್ತೆ ದಳ ಮತ್ತು ಶ್ವಾನದಳದ ಪೊಲೀಸರು ಸೋಮವಾರ ನ್ಯಾಯಾಲಯ ಮತ್ತದರ ಸುತ್ತಮುತ್ತ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಪರಿಶೀಲನೆಯ ಬಳಿಕ ಇದೊಂದು ಹುಸಿ ಬೆದರಿಕೆ ಮೆಸೇಜ್‌ ಎಂದು ಪೊಲೀಸರು ಹೇಳಿದ್ದಾರೆ. ನ್ಯಾಯಾಲಯದ ಇ-ಮೇಲ್‌ ವಿಳಾಸಕ್ಕೆ ಅನ್ವನಂತನ್‌ ಐಯ್ಯಪ್ಪನ್‌ ಎನ್ನುವ ಹೆಸರಿನಲ್ಲಿ ಇ--ಮೇಲ್‌ ಸಂದೇಶ ಬಂದಿತ್ತು. ನ್ಯಾಯಾಲಯದ ಆವರಣದಲ್ಲಿ ಕೆಮಿಕಲ್‌ ಬಾಂಬ್‌ ಇಟ್ಟು ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇಸ್ರೇಲ್‌ ದೂತಾವಾಸದೊಂದಿಗೆ ಮಂಗಳೂರು ನ್ಯಾಯಾಲಯವನ್ನೂ ಸ್ಪೋಟಿಸುವುದಾಗಿ ಮೇಲ್‌ನಲ್ಲಿ ಬರೆದಿದ್ದಾನೆ. ತನ್ನನ್ನು ಜೆನ್‌ ಝಿ ಡಿಎಂಕೆ ಲೀಡರ್‌ ಎಂದು ಹೇಳಿಕೊಂಡಿದ್ದಾನೆ. ಸಂಸದ ಎನ್‌.ಆರ್‌. ಇಳಂಗೋವನ್‌ ನಾಡಿಗೆ ದ್ರೋಹ ಎಸಗಿದ್ದಾರೆ. ಈ ಕಾರಣಕ್ಕಾಗಿ ಬಾಂಬ್‌ ಇಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಎಲ್ಲ ನ್ಯಾಯಾ˜ಶರ ಮೂಗು ಮತ್ತು ಬಾಯಿಗಳನ್ನು ಮುಚ್ಚಿ ಅವರನ್ನು ಕೂಡಲೇ ಸ್ಥಳಾಂತರಿಸಿ ಎಂದು ಮೇಲ್‌ನಲ್ಲಿ ಬರೆದಿದ್ದಾನೆ.
ಭಾನುವಾರ ರಾತ್ರಿ ಇ--ಮೇಲ್‌ ಬಂದಿದ್ದು, ಸೋಮವಾರ ಮಧ್ಯಾಹ್ನದ ವೇಳೆ ಮೇಲ್‌ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಕೋರ್ಟ್‌ ಕಟ್ಟಡದ ಎಲ್ಲ ಕೊಠಡಿಗಳಲ್ಲೂ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಯಾವುದೇ ಅನುಮಾನಾಸ್ಪದ ಸೊತ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಈ ಕುರಿತು ಬಂದರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋರ್ಟ್‌ಗಳಿಗೆ ನಿರಂತರ ಹುಸಿ ಬೆದರಿಕೆ

ಇತ್ತೀಚೆಗೆ ವಿವಿಧ ನ್ಯಾಯಾಲಯಗಳಿಗೆ ಅಪರಿಚಿತ ವ್ಯಕ್ತಿಗಳಿಂದ ಹುಸಿ ಬೆದರಿಕೆ ಸಂದೇಶಗಳು ನಿರಂತರವಾಗಿ ಬರುತ್ತಿವೆ. ಇದೀಗ ಮಂಗಳೂರು, ಈ ಹಿಂದೆ ಉಡುಪಿ ಸೇರಿದಂತೆ ಚಾಮರಾಜನಗರ, ಕಾರವಾರ, ಬಾಗಲಕೋಟೆ ಸೇರಿದಂತೆ ವಿವಿಧ ಕೋರ್ಟ್‌ಗಳಿಗೆ ಬೆದರಿಕೆ ಸಂದೇಶ ಹೋಗಿತ್ತು.