ವಿಜಯಪುರ: ಮಲ್ಲೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಚುರುಕುಗೊಳಿಸಲಾಗಿದೆ. ಇಂಥ ವಿಷಯದಲ್ಲಿ ರಾಜಕೀಯ ಸಲ್ಲದು ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ವಿಪಕ್ಷ ನಾಯಕರಿಗೆ ಕಿವಿಮಾತು ಹೇಳಿದರು.
ಈ ಹಿಂದೆ ಪುಲ್ವಾಮಾ-ಬಾಲಾಕೋಟ್ ದಾಳಿಯಾದಾಗ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಅಷ್ಟೊಂದು ಪ್ರಮಾಣದಲ್ಲಿ ಆರ್‌ಡಿಎಕ್ಸ್ ಒಳ ಬಂದಿದ್ದು ಹೇಗೆ? ಎಂದು ನಾವೂ ಪ್ರಶ್ನಿಸಬೇಕಾಗುತ್ತದೆ. ಹಾಗೆ ಪರಸ್ಪರ ಪ್ರಶ್ನಿಸುವ ಸನ್ನಿವೇಶ ಇದಲ್ಲ. ದೇಶದ ವಿಚಾರಕ್ಕೆ ಬಂದಾಗ ಎಲ್ಲರೂ ಇಂಥ ಪ್ರಕರಣಗಳನ್ನು ಒಟ್ಟಾಗಿ ಖಂಡಿಸಬೇಕಾಗುತ್ತದೆ. ಅದರ ಬದಲು ರಾಜಕೀಯ ಬೆರೆಸಬಾರದು ಎಂದು ಶನಿವಾರ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.
ಕರ್ನಾಟಕ ಶಾಂತಿಗೆ ಹೆಸರಾದ ನಾಡು. ಬಾಂಬ್ ಕೃತ್ಯ ಎಸಗಿದವರು ಯಾರೇ ಇರಲಿ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಜಾತಿ, ಧರ್ಮಕ್ಕೆ ಸೇರಿದವರಿದ್ದರೂ ಸರಿ. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಾಂಬ್ ಬೆಂಗಳೂರು ಪದ ಬಳಸಿರುವ ಆರ್.ಅಶೋಕ ಹೇಳಿಕೆ ತಪ್ಪು. ಆ ಪದ ಬ ಳಕೆ ಸರಿಯಲ್ಲ. ಇಡೀ ರಾಷ್ಟ್ರಕ್ಕೆ ಆ ಪದ ಹೋಗಲಿದೆ ಎಂದರು.
ವಿಧಾನ ಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಎಸ್‌ಎಲ್ ತನಿಖೆಗೆ ವಿಡಿಯೋ ದೃಶ್ಯಾವಳಿಗಳನ್ನು ಕಳುಹಿಸಿಕೊಡಲಾಗಿದೆ. ಘೋಷಣೆ ಮಾಡಿದ್ದು ನಿಜವೇ ಆಗಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸದ್ಯ ಎಫ್ ಎಸ್‌ಎಲ್ ವರದಿ ಏನಾಗಿದೆ ಎಂಬ ಮಾಹಿತಿ ಇಲ್ಲ, ವರದಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಿಸಿದ್ದು ನಿಜವೇ ಆಗಿದ್ದರೆ ಕ್ರಮ ಕೈಗೊಳ್ಳುವುದು ನಿಶ್ಚಿತ. ಅದರಲ್ಲಿ ಅನುಮಾನವೇಕೆ? ಭಾರತದಲ್ಲಿದ್ದು ಪಾಕಿಸ್ತಾನ ಪರ ಘೋಷಣೆ ಕೂಗಿದರೆ ಸುಮ್ಮನೇ ಇರುತ್ತೇವಾ? ಎಂದರು.
ಇನ್ನು ಜಾತಿಗಣತಿ ವರದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಎಂ.ಬಿ. ಪಾಟೀಲ, ಇನ್ನೂ ನೋಡಿಲ್ಲ; ಹೀಗಾಗಿ ಈಗಲೇ ಏನೂ ಹೇಳಲಾರೆ. ನಮ್ಮ ಒತ್ತಾಯವಿಷ್ಟೇ-ಎಲ್ಲ ಲಿಂಗಾಯತರನ್ನು ಒಂದೇ ಸೂರಿನಡಿ ತರಬೇಕು. ಒಕ್ಕಲಿಗ ಉಪ ಪಂಗಡಗಳನ್ನು ಒಂದೇ ಸೂರಿನಡಿ ತರಬೇಕು. ಆ ನಿಟ್ಟಿನಲ್ಲಿ ಗಣತಿ ಮಾನದಂಡ ಏನಾಗಿತ್ತು ಎಂಬುದು ನೋಡಬೇಕು. ನಮ್ಮ ಜನಸಂಖ್ಯೆ ಹೆಚ್ಚಾಗಿದೆಯಾ? ಕಡಿಮೆಯಾಗಿದೆಯಾ? ಎಂಬುದು ನೋಡಬೇಕು. ಶಾಮನೂರ ಶಿವಶಂಕರಪ್ಪ ಅವರ ಹೇಳಿಕೆ ಬಗ್ಗೆ ಮಾತನಾಡಲ್ಲ, ನನ್ನ ವೈಯಕ್ತಿಕ ನಿಲುವು ಏನೆಂದರೆ ಹರಿದು ಹಂಚಿ ಹೋಗಿರುವ ಲಿಂಗಾಯತ ಸಮುದಾಯಗಳನ್ನು ಒಂದೇ ಸೂರಿನಡಿ ತಂದು ಗಣತಿ ಮಾಡಬೇಕು ಎಂದರು.