ವಿಟ್ಲ: ಬೊಳ್ನಾಡು ಸಿಂಹಮೂಲೆ ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಮಕ್ಕಳನ್ನೇ ದೇವರ ಸಂಕಲ್ಪದಲ್ಲಿ ಆರಾಽಸುವ ಭರಣಿ ಮಹೋತ್ಸವ ಹಾಗೂ ದೇವಿ ಶಿವನ ಭೇಟಿಯ ಅಪೂರ್ವ ಕ್ಷಣ ೬೦೦ ವರ್ಷಗಳ ಬಳಿಕ ಸಂಪನ್ನಗೊಂಡಿತು.
ಭರಣಿ ಮಹೋತ್ಸವದಲ್ಲಿ ಭರಣಿ ನಕ್ಷತ್ರ ವಿಶೇಷ ಸ್ಥಾನವನ್ನು ಹೊಂದಿದ್ದು, ಧ್ವಜಾರೋಹಣ ಅಥವಾ ಧ್ವಜಾವರೋಹಣದ ಸಂದರ್ಭದಲ್ಲಿ ಭರಣಿ ನಕ್ಷತ್ರವಿರಬೇಕಾಗಿದೆ. ಮಗುವನ್ನು ದೇವರ ರೂಪದಲ್ಲಿ ಕಾಣುವ ಮಗುವಿಗೆ ಮುಹೂರ್ತ ಕಾರ್ಯ ನಡೆಯುತ್ತದೆ.
ಕ್ಷೇತ್ರದ ವ್ಯಾಪ್ತಿಯ ಒಳಗಿನ ಭರಣಿ ನಕ್ಷತ್ರದಲ್ಲಿರುವ ಮಗುವನ್ನು ಭಗವತೀ ಸಂಕಲ್ಪದಲ್ಲಿ ಆರಾಧನೆ ಮಾಡಲಾಗುತ್ತದೆ. ಉತ್ಸವದಲ್ಲಿ ಎಳೆಯ ಮಕ್ಕಳನ್ನು ಶೃಂಗರಿಸಿ ಭಗವತೀ ದೇವತೆಯ ಸಂಕಲ್ಪದಲ್ಲಿ ಕಂಚಿಲ್ ಸೇವೆ ವಿಶೇಷವಾಗಿರುತ್ತದೆ.
ಸಿಂಹಮೂಲೆ ಬೊಳ್ನಾಡು ಶ್ರೀ ಚೀರುಂಭ ಭಗವತೀ ಕ್ಷೇತ್ರದಿಂದ ಆಯುಧಧಾರಿಯಾಗಿ ದೇವಿ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ತೆರಳುವ ಮೂಲಕ ದೇವಿ ಹಾಗೂ ಶಿವನ ಭೇಟಿಯ ವಿಶೇಷ ಕಾರ್ಯಕ್ರಮ ನಡೆಯಿತು.
ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರು, ಬೊಳ್ನಾಡು ಶ್ರೀ ಭಗವತೀ ತೀಯಾ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಕೃಷ್ಣ ಎನ್. ಉಚ್ಚಿಲ್ ಸೇರಿ ವಿವಿಧ ಸಮಿತಿಯ ಸದಸ್ಯರು ಈ ಸಂದರ್ಭ ಇದ್ದರು.
ಭದ್ರಕಾಳಿ ಶಿವನ ಭೇಟಿ
ಮಂಗಳವಾರ ನಡುರಾತ್ರಿ ಭರಣಿ ನಕ್ಷದಲ್ಲಿ ಜನಿಸಿದ ಭದ್ರಕಾಳಿ ಶಿವನ ಮಗಳೆಂಬ ಪ್ರತೀತಿಯಿದೆ. ಎಲ್ಲರಿಗೆ ತೊಂದರೆ ನೀಡುತ್ತಿದ್ದ ಧಾರಿಕಾಸುರನ ವಧೆಗಾಗಿ ಸೃಷ್ಟಿ ಮಾಡಿದ್ದು,ಬೇತಾಳನನನ್ನು ವಾಹನವಾಗಿ ಮಾಡಿಕೊಂಡು ವಧೆ ಮಾಡುತ್ತಾಳೆ. ಈ ಸಂದರ್ಭ ಉಂಟಾಗುವ ದಾಯ ನಿವಾರಣೆಗೆ ವಿವಿಧ ರೀತಿಯ ತರ್ಪಣಗಳನ್ನು ನೀಡಿದರೂ ಶಮನವಾಗದ ಹಿನ್ನೆಲೆಯಲ್ಲಿ ಶಿವ ಹಣೆಗೆ ತಿಲಕ ಇಡುವ ಕಾರ್ಯ ಮಾಡುತ್ತಾನೆ. ಈ ನಿಟ್ಟಿನಲ್ಲಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ದೇವಿ ಮತ್ತು ಶಿವನ ಭೇಟಿ ಕಾರ್ಯ ನಡೆಯಿತು.