ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ಕೃತ್ಯ ತಡೆಯುವಲ್ಲಿ ಭದ್ರತಾ ಲೋಪ ಆಗಿರುವುದು ನಿಜ. ಆದರೆ ಭಯೋತ್ಪಾದಕರನ್ನು ಮಟ್ಟಹಾಕಲು ಕೇಂದ್ರ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಸಿಂಧೂ ನದಿ ನೀರನ್ನು ಇನ್ಮುಂದೆ ಹಂಚಿಕೊಳ್ಳುವುದಿಲ್ಲ. ಒಂದು ಹನಿ ನೀರನ್ನೂ ಕೊಡುವುದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಪಾಕಿಸ್ತಾನ ಜೀವಂತ ಶವವಾಗಿದೆ. ಮುಂದಿನ ದಿನ ವಿಶ್ವದ ಭೂಪಟದಲ್ಲೇ ಪಾಕಿಸ್ತಾನದ ಹೆಸರಿಲ್ಲದಂತೆ ಆಗುವುದೂ ಅಷ್ಟೇ ಸತ್ಯ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿಂಧೂ ನದಿ ನೀರು ಪಾಕಿಸ್ತಾನದ ಶೇ.80ರಷ್ಟು ಕೃಷಿ ಚಟುವಟಿಕೆಗೆ ಪೂರಕವಾಗಿದೆ. ಲಾಹೋರ್ ಸೇರಿ ಮೂರು ನಗರಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಘಟನೆ ನಡೆದ ಎರಡು ದಿನಗಳಲ್ಲಿ ನದಿ ನೀರು ಹಂಚಿಕೊಳ್ಳಲ್ಲ ಎಂದಿದ್ದಾರೆ. ಉಗ್ರರನ್ನು ಹುಡುಕಿ ಕೊಲ್ಲುತ್ತೇವೆಂದು ಮೋದಿ ಹೇಳಿರುವುದು ಧೈರ್ಯದ ಸಂಕೇತ. ಈ ವಿಚಾರದಲ್ಲಿ ಭಾರತವನ್ನು ಕೆಲ ಮುಸ್ಲಿಂ ರಾಷ್ಟ್ರಗಳು ಮತ್ತು ಪ್ರತಿಪಕ್ಷಗಳು ಸಹ ಬೆಂಬಲಿಸಿವೆ ಎಂದರು.
ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ದೇಶದ ಎಲ್ಲ ಜಾತಿ, ಉಪ ಜಾತಿಗಳನ್ನು ಛಿದ್ರ ಮಾಡಿದ್ದಾರೆ. ಪಹಲ್ಗಾಮ್ ಘಟನೆ ಬಳಿಕ ಹಿಂದುಗಳು ಭಾರತ ಮಾತೆ ಮಕ್ಕಳು ಎಂದು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಹಿಂದುಗಳನ್ನು ಟಾರ್ಗೆಟ್ ಮಾಡಿ ನರಮೇಧ ನಡೆಸಿರುವುದನ್ನು ಇಡೀ ದೇಶವೇ ವಿರೋಧಿಸಿದೆ. ಈ ಹಿಂದೆ ಭಾರತದ ಮೇಲೆ ಪಾಕಿಸ್ತಾನ ಯುದ್ಧಕ್ಕೆ ಬಂದಾಗ ಇಂದಿರಾ ಗಾಂಧಿ ಪ್ರಧಾನಿ ಆಗಿದ್ದರು. ಆಗ ಪ್ರತಿಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ದೇಶವನ್ನು ಇಂದಿರಾ ಗಾಂಧಿ ಕಾಪಾಡಲಿದ್ದಾರೆಂದು ಬೆಂಬಲಿಸಿದ್ದರು. ಅದರಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೇಶ ಒಂದಾಗಬೇಕು. ಕೇಂದ್ರ ಸರ್ಕಾರದ ಜತೆ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದಿರುವುದು ಸಂತೋಷ ತಂದಿದೆ ಎಂದು ಹೇಳಿದರು.
ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಇ.ವಿಶ್ವಾಸ್, ಶ್ರೀಕಾಂತ್, ಮೋಹನ್ ಜಾಧವನ್, ನಾಗರಾಜ್, ಜಗದೀಶ್ ಸುದ್ದಿಗೋಷ್ಠಿಯಲ್ಲಿದ್ದರು.