ಮಂಗಳೂರು: ಕರೊನಾ ಸೋಂಕಿಗೆ ಬಲಿಯಾದ ಯುವಕನ ಅಂತ್ಯಸಂಸ್ಕಾರಕ್ಕೆ ಭಾನುವಾರ ಬೋಳಾರದ ಮಸೀದಿ ಆವರಣದ ದಫನ ಭೂಮಿಯಲ್ಲಿ ಕೆಲ ಕಾಲ ಕೆಲವು ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಸ್ಥಳೀಯರನ್ನು ಮನವೊಲಿಸಿ, ಬೋಳಾರದಲ್ಲೇ ಶವಸಂಸ್ಕಾರ ಮಾಡಿಸುವಲ್ಲಿ ಯಶಸ್ವಿಯಾದರು.
ಸುರತ್ಕಲ್ ಸಮೀಪದ ಇಡ್ಯಾದ ಯುವಕ ಶನಿವಾರ ರಾತ್ರಿ ಮೃತಪಟ್ಟಿದ್ದರು. ಅವರ ದಫನ ಕಾರ್ಯ ಇಡ್ಯಾದ ಮಸೀದಿಗೊಳಪಟ್ಟ ದಫನ ಭೂಮಿಯಲ್ಲಿ ನೆರವೇರಿಸಲು ನಿರ್ಧರಿಸಲಾಗಿತ್ತು. ಆದರೆ ಅಲ್ಲಿನ ಕಬರ್ ಗುಂಡಿಗೆ ನೀರು ಹರಿದು ಬರುತ್ತಿತ್ತು. ಮಸೀದಿ ಪದಾಧಿಕಾರಿಗಳ ಮತ್ತು ಸಮುದಾಯದ ಮುಖಂಡರ ಮನವಿಯ ಮೇರೆಗೆ ಭಾನುವಾರ ಬೆಳಗ್ಗೆ ಬೋಳಾರದ ಮಸೀದಿ ಆವರಣದ ದಫನ ಭೂಮಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗಿತ್ತು.
ಅಷ್ಟರಲ್ಲಿ ಮಸೀದಿಗೆ ಸಂಬಂಧವಿಲ್ಲದ ಸ್ಥಳೀಯ ಕೆಲವು ಮಂದಿ ವಿರೋಧ ವ್ಯಕ್ತಪಡಿಸಿದ್ದರು. ಆ ಹಿನ್ನೆಲೆಯಲ್ಲಿ ಬೋಳಾರದಲ್ಲಿ ದಫನ ಕೈಬಿಟ್ಟು ಮೃತದೇಹವನ್ನು ಆಂಬುಲೆನ್ಸ್ ಮೂಲಕ ಇಡ್ಯಾಕ್ಕೆ ಕೊಂಡೊಯ್ಯಲಾಯಿತು. ಮಾಹಿತಿ ಪಡೆದ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಮೃತದೇಹವನ್ನು ಮತ್ತೆ ಬೋಳಾರಕ್ಕೆ ತರಲು ಸೂಚಿಸಿ, ಅಂತ್ಯಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದವರ ಜತೆ ಮಾತುಕತೆ ನಡೆಸಿ, ಮನವೊಲಿಸಿದರು. ಬೋಳಾರ ಪರಿಸರದವರು ಕರೊನಾಕ್ಕೆ ಬಲಿಯಾದರೆ ಅಂತ್ಯಸಂಸ್ಕಾರಕ್ಕೆ ವಿರೋಧವಿಲ್ಲ. ಹೊರಗಿನ ವರ ಅಂತ್ಯಸಂಸ್ಕಾರವನ್ನು ಇಲ್ಲಿ ನಡೆಸುವುದು ಸರಿಯಲ್ಲ. ಅದಕ್ಕೆ ಆಕ್ಷೇಪವಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿತ್ತು.
ಸದ್ಯಕ್ಕೆ ಅವಕಾಶ ಮಾಡಿಕೊಡಿ ಎಂಬ ಸಹಾಯಕ ಆಯುಕ್ತ ಮನವಿಗೆ ಸ್ಥಳೀಯರು ಒಪ್ಪಿ ಸಂಜೆ ಬೋಳಾರದಲ್ಲಿ ದಫನ ನಡೆಯಿತು. ಪೊಲೀಸರು ಬಂದೋಬಸ್ತ್ ಮಾಡಿದ್ದರು.