ಹುಬ್ಬಳ್ಳಿ: ಕೇಂದ್ರಿಯ ಜಾಗೃತ ಆಯೋಗ (ಸಿವಿಸಿ) ಮಾರ್ಗಸೂಚಿಗಳ ಪ್ರಕಾರ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಹಾಗೂ ಧಾರವಾಡ ವಲಯದ ವತಿಯಿಂದ ಗ್ರಾಹಕ ಜಾಗೃತಿ ಶಿಬಿರ ಆಯೋಜಿಸಲಾಯಿತು.
ಬ್ಯಾಂಕ್ ಆಫ್ ಇಂಡಿಯಾ ವಲಯ ಪ್ರಬಂಧಕ ತರಣಿ ಚರಣ್ ಸಾಹು ಅಧ್ಯಕ್ಷತೆಯಲ್ಲಿ ಜರುಗಿದ ಶಿಬಿರದಲ್ಲಿ ಬ್ಯಾಂಕ್ ವ್ಯವಹಾರಗಳಿಗೆ ಸಂಬಂಧಿಸಿ ಮೋಸ, ವಂಚನೆ ಮಾಡುವವರ ಬಗ್ಗೆ ಎಚ್ಚರಿಕೆ ವಹಿಸುವಂತೆ ಗ್ರಾಹಕರಿಗೆ ತಿಳಿವಳಿಕೆ ನೀಡಲಾಯಿತು.
ಬ್ಯಾಂಕಿನ ಪ್ರಧಾನ ಕಚೇರಿಯ ವಿಜಿಲನ್ಸ್ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ವಿವೇಕ್ ಚಂದ್ರ ಹಾಗೂ ಹುಬ್ಬಳ್ಳಿ ಧಾರವಾಡ ಸೈಬರ್ ಕ್ರೈಂ ವಿಭಾಗದ ಉಪನಿರೀಕ್ಷಕ ಶಿವಾನಂದ ಅವರು ಹಾಜರಿದ್ದರು. ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಉಂಟು ಮಾಡಲಾಯಿತು.
ತೋಳನಕೆರೆ ಉದ್ಯಾನದಲ್ಲಿ ವಾಕ್ ಥಾನ್, ಮಾನವ ಸರಪಳಿ ನಿರ್ಮಾಣ, ವಲಯ ಕಚೇರಿಯಲ್ಲಿ ಕ್ವಿಜ್ ಸ್ಪರ್ಧೆ, ರಂಗೋಲಿ, ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಗಳ ಮೂಲಕ ಜಾಗೃತಿ ಮೂಡಿಸಲಾಯಿತು.
ಉಪವಲಯ ಪ್ರಬಂಧಕ ಅಭಿನವ ಪಾಂಡೆ ಸಮಾರೋಪದಲ್ಲಿ ಅತಿಥಿಗಳಾಗಿದ್ದರು. ವಿಜಿಲನ್ಸ್ ವಿಭಾಗದ ಮುಖ್ಯ ವ್ಯವಸ್ಥಾಪಕ ರಾಕೇಶ ರಂಜನ್ ವಂದಿಸಿದರು.