ಮೈಸೂರು: ಬೋಗಾದಿ ಪಟ್ಟಣ ಪಂಚಾಯಿತಿ 2024-25ನೇ ಸಾಲಿನ ಆಯವ್ಯಯವನ್ನು ಸಿದ್ಧಡಿಸುವ ಸಂಬಂಧ ಪೂರ್ವಭಾವಿ ಸಭೆ ನಡೆಯಿತು.
ಪಪಂ ಕಚೇರಿಯಲ್ಲಿ ಕರೆದಿದ್ದ ಸಭೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ವಿವಿಧ ಸಂಘ-ಸಂಸ್ಥೆ ಪ್ರತಿನಿಧಿಗಳು ಬೇಡಿಕೆ, ಸಲಹೆ, ಸೂಚನೆಗಳನ್ನು ನೀಡಿದರು.
ಪಂಚಾಯಿತಿ ವ್ಯಾಪ್ತಿಯ ಜನವಸತಿ ಪ್ರದೇಶದಲ್ಲಿ ಮೂಲಸೌಕರ್ಯ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಬೇಕು. ಮುಡಾದಿಂದ ಹಸ್ತಾಂತರಗೊಂಡಿರುವ ಬಡಾವಣೆಯಲ್ಲಿ ಒಳಚರಂಡಿ ಸಮಸ್ಯೆಯಿದೆ. ಕೆಲವು ಕಡೆ ಪೈಪ್‌ಲೈನ್ ಇಲ್ಲ. ಇನ್ನೂ ಕೆಲವು ಕಡೆ ಹಾಳಾಗಿವೆ. ಇದರ ದುರಸ್ತಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಕೆಲವು ಕಡೆ ಕುಡಿಯುವ ನೀರಿನ ಸಮಸ್ಯೆಯಿದೆ. ಬೇಸಿಗೆ ಕಾಲದಲ್ಲಿ ಇದು ಇನ್ನಷ್ಟು ತೀವ್ರವಾಗಲಿದೆ. ಆದ್ದರಿಂದ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಾರ್ವಜನಿಕರು ಸಲಹೆ ನೀಡಿದರು.
ಮುಡಾದಿಂದ ಹಸ್ತಾಂತರಗೊಂಡಿರುವ ಬಡಾವಣೆಯಲ್ಲಿ ಬೀದಿದೀಪಗಳಿಲ್ಲ. ಇದು ನಿವಾಸಿಗಳಿಗೆ ತೊಂದರೆಯಾಗಿದೆ. ಈ ಸಮಸ್ಯೆ ಬಗೆಹರಿಸಲು ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಬೇಕು. ಜತೆಗೆ, ಉದ್ಯಾನ ಅಭಿವೃದ್ಧಿಗೂ ಒತ್ತು ನೀಡಬೇಕು ಎಂಬ ಸಲಹೆಯೂ ವ್ಯಕ್ತವಾಯಿತು.
ಕೆಲವೆಡೆ ಕಾಮಗಾರಿ ಸ್ಥಗಿತಗೊಂಡಿವೆ. ಇವುಗಳನ್ನು ಪೂರ್ಣಗೊಳಿಸಲು ಅನುದಾನವನ್ನು ಕಾಯ್ದಿಡಬೇಕು. ಸ್ಮಶಾನ ಅಭಿವೃದ್ಧಿ ಪಡಿಸಿ ನೀರಿನ ವ್ಯವಸ್ಥೆ, ಕಾಂಪೌಂಡ್ ನಿರ್ಮಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಬೋಗಾದಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಬಸವರಾಜು ಮಾತನಾಡಿ, ಸಾರ್ವಜನಿಕರ ಸಲಹೆ-ಸೂಚನೆ ಸ್ವೀಕಾರ ಮಾಡಿದ್ದು, ಇವುಗಳಲ್ಲಿ ಸೂಕ್ತವಾದ ಸಲಹೆಯನ್ನು ಹಂತ ಹಂತವಾಗಿ ಜಾರಿಗೊಳಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ವಿವಿಧ ಮೂಲಗಳಿಂದ 17.40 ಕೋಟಿ ರೂ. ಆದಾಯ ಬರಲಿದ್ದು, 17.27 ಕೋಟಿ ರೂ.ವೆಚ್ಚವಾಗಲಿದ್ದು, 12.75 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆಯಾಗುವ ಸಾಧ್ಯತೆಯಿದೆ ಎಂದರು.
ವಿವಿಧ ಮೂಲಗಳಿಂದ 6.90 ಕೋಟಿ ರೂ., ಕೇಂದ್ರ, ರಾಜ್ಯ ಸರ್ಕಾರದಿಂದ 10.50 ಕೋಟಿ ರೂ. ಸೇರಿದಂತೆ 17.40 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆಸ್ತಿ ತೆರಿಗೆಯಿಂದ 3.50 ಕೋಟಿ ರೂ., ಕಟ್ಟಡ ಪರವಾನಗಿಯಿಂದ 1 ಕೋಟಿ ರೂ.,ನೀರಿನ ಬಳಕೆ ಶುಲ್ಕದಿಂದ 65 ಲಕ್ಷ ರೂ. ಆದಾಯ ಬರುವ ನಿರೀಕ್ಷೆಯಿದ್ದು, ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನದಿಂದ 1.10 ಕೋಟಿ ರೂ., 15ನೇ ಹಣಕಾಸು ಅನುದಾನದಿಂದ 2.20 ಕೋಟಿ ರೂ.ಎಸ್‌ಎಫ್‌ಸಿ ವಿದ್ಯುತ್ ಅನುದಾನದಿಂದ 5 ಕೋಟಿ ರೂ., ಎಸ್‌ಎಫ್‌ಸಿ ಅನುದಾನದಿಂದ 1.05 ಕೋಟಿ ರೂ. ಸರ್ಕಾರದಿಂದ ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು.
1 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗೆ, ಹೊಸ ಮಳಿಗೆ ನಿರ್ಮಾಣಕ್ಕಾಗಿ 30 ಲಕ್ಷ ರೂ., ಪಟ್ಟಣ ಪಂಚಾಯಿತಿ ಕಚೇರಿ ಕಟ್ಟಡಕ್ಕಾಗಿ 50 ಲಕ್ಷ ರೂ., ಬೀದಿ ದೀಪಗಳ ನಿರ್ವಹಣೆ-ದುರಸ್ತಿಗಾಗಿ 65 ಲಕ್ಷ ರೂ., ನೀರು ನಿರ್ವಹಣೆಗೆ 65 ಲಕ್ಷ ರೂ. ಕಾಯ್ದಿರಿಸಲಾಗುವುದು ಎಂದು ತಿಳಿಸಿದರು.
ಕಂದಾಯ ನಿರೀಕ್ಷ ಡಿ.ಎಸ್.ವಿಜಯ್, ಸಹಾಯಕ ಇಂಜಿನಿಯರ್ ಹರ್ಷ, ಲೆಕ್ಕಾಧಿಕಾರಿ ಪ್ರಕಾಶ್, ಸಮುದಾಯ ಸಂಘಟನಾಧಿಕಾರಿ ಕಾಮರಾಜು, ಕಿರಿಯ ಆರೋಗ್ಯ ನಿರೀಕ್ಷ ಎ.ಡಿ.ಪುನೀತ್ ಮತ್ತಿತರರಿದ್ದರು.