ಜಿಲ್ಲೆ

ಅಭಿವೃದ್ಧಿಯ ಕನಸಿನಲ್ಲಿ ನೂತನ ಬೋಗಾದಿ ಪಟ್ಟಣ ಪಂಚಾಯಿತಿ

Mysuru

*ಹಲವು ಕೊರತೆ, ಸಮಸ್ಯೆಗಳು ಎದುರಿಸುತ್ತಿರುವ ಪಟ್ಟಣ
*ತ್ಯಾಜ್ಯ ವಿಲೇವಾರಿಯದ್ದೇ ದೊಡ್ಡ ಸಮಸ್ಯೆ
ಸದೇಶ್ ಕಾರ್ಮಾಡ್ ಮೈಸೂರು
ಮೈಸೂರು ನಗರದ ಹೊರ ವಲಯದಲ್ಲಿ ನೂತನವಾಗಿ ರಚನೆಗೊಂಡಿರುವ ಬೋಗಾದಿ ಪಟ್ಟಣ ಪಂಚಾಯಿತಿ ಹಲವು ಕೊರತೆಗಳ ನಡುವೆ ಅಭಿವೃದ್ಧಿಯ ಕನಸು ಕಾಣುತ್ತಿದೆ.
ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಬೋಗಾದಿ ಮತ್ತು ಮರಟಿಕ್ಯಾತನಹಳ್ಳಿ ಗ್ರಾಮ ಪಂಚಾಯಿತಿಯ ಪೂರ್ಣಭಾಗ, ಬೆಳವಾಡಿ ಮತ್ತು ಬೀರಿಹುಂಡಿ ಗ್ರಾಮ ಪಂಚಾಯಿತಿಯ ಭಾಗಶಃ ಭಾಗಗಳನ್ನು ಒಟ್ಟು ಸೇರಿಸಿ ನೂತನ ಬೋಗಾದಿ ಪಟ್ಟಣ ಪಂಚಾಯಿತಿ ರಚಿಸಲಾಯಿತು. ಒಟ್ಟಾರೆ 15 ಗ್ರಾಮಗಳು ನೂತನ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆಗೊಂಡಿವೆ. ಪ್ರಸ್ತುತ ಪ.ಪಂ. ವ್ಯಾಪ್ತಿಯಲ್ಲಿ 28 ಸಾವಿರ ಜನಸಂಖ್ಯೆ ಇದ್ದು, ಹಲವು ಇಲ್ಲಗಳ ನಡುವೆ ನಾಗರಿಕರಿಗೆ ಉತ್ತಮ ಸೇವೆ ಒದಗಿಸುವುದು ಪ.ಪಂ. ಮುಂದಿರುವ ಬಹುದೊಡ್ಡ ಸವಾಲಾಗಿದೆ.

ಪಟ್ಟಣ ಪಂಚಾಯಿತಿ ರಚನೆ ನಂತರ ಗ್ರಾಮ ಪಂಚಾಯಿತಿ ಪಿಡಿಒ, ಕಾರ್ಯದರ್ಶಿಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಹಿಂಪಡೆ ದಿದೆ. ಆದರೆ, ಡಾಟ ಎಂಟ್ರಿ ಆಪರೇಟರ್, ಬಿಲ್ ಕಲೆಕ್ಟರ್ ಸೇರಿದಂತೆ 11 ನೌಕರರು, 34 ಪೌರ ಕಾರ್ಮಿಕರು ಪ.ಪಂ.ನಲ್ಲಿ ಮುಂದುವ ರೆದಿದ್ದಾರೆ. ಆದರೆ, ರೆವಿನ್ಯೂ ಇನ್ಸ್‌ಪೆಕ್ಟರ್, ಜೂನಿಯರ್ ಇಂಜಿನಿಯರ್, ಆರೋಗ್ಯಾಧಿಕಾರಿ ಸೇರಿದಂತೆ ಕೆಲವು ಪ್ರಮುಖ ಹುದ್ದೆಗಳು ಖಾಲಿ ಇದ್ದು, ಅಕ್ಕಪಕ್ಕದ ತಾಲೂಕಿನ ಪಟ್ಟಣ ಪಂಚಾಯಿತಿಗಳ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹೀಗಾಗಿ ಕಚೇರಿಯ ಕಾರ್ಯನಿರ್ವಹಣೆಗೆ ದೊಡ್ಡ ಸಮಸ್ಯೆ ಎದುರಾಗುತ್ತಿಲ್ಲ. ಆದರೆ, ಆದಷ್ಟು ಬೇಗ ಖಾಯಂ ಸಿಬ್ಬಂದಿ ನೇಮಕಕ್ಕೆ ಸರ್ಕಾರ ಕ್ರಮ ವಹಿಸಬೇಕಾಗಿದೆ.
ಪಟ್ಟಣ ಪಂಚಾಯಿತಿಗೆ ಸ್ವಂತ ಕಟ್ಟಡ ಸಹ ಇಲ್ಲ. ಪ್ರಾರಂಭದಲ್ಲಿ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಪ್ರಾರಂಭಗೊಂಡ ಪಟ್ಟಣ ಪಂಚಾ ಯಿತಿ ಕಚೇರಿ ಇದೀಗ ಬಾಡಿಗೆ ಕಟ್ಟಡವೊಂದಕ್ಕೆ ಸ್ಥಳಾಂತರಗೊಂಡಿದೆ. ಬೋಗಾದಿಯಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಬೋಗಾದಿ ಪಟ್ಟಣ ಪಂಚಾಯಿತಿ ವರ್ತುಲ ರಸ್ತೆಗೆ ಹೊಂದಿಕೊಂಡು ಇದೆ. ವರ್ತುಲ ರಸ್ತೆಯಲ್ಲಿರುವ ಕೆಲವು ವರ್ತಕರು, ಸಾರ್ವಜ ನಿಕರು ತ್ಯಾಜ್ಯವನ್ನು ರಸ್ತೆಗೆ ತಂದು ಸುರಿಯುತ್ತಿರುವುದು ಪಂಚಾಯಿತಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ.ಪಂ.ಗೆ ತ್ಯಾಜ್ಯ ವಿಲೇವಾರಿಗೆ ಸ್ವಂತ ಜಾಗ ಇಲ್ಲದ ಹಿನ್ನೆಲೆಯಲ್ಲಿ ಮೈಸೂರು ನಗರ ಪಾಲಿಕೆಯನ್ನು ಆಶ್ರಯಿಸಿದೆ. ಪ್ರಸ್ತುತ ಪಟ್ಟಣದಲ್ಲಿ ತ್ಯಾಜ್ಯವನ್ನು ಸಂಗ್ರಹಿಸಿ ಮೈಸೂರು ನಗರದ ಸೂಯೇಜ್ ಫಾರ್ಮ್‌ನಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಇದಕ್ಕೆ ಮೈಸೂರು ನಗರ ಪಾಲಿಕೆಗೆ ಪ.ಪಂ. ಒಂದು ಟನ್ ತ್ಯಾಜ್ಯಕ್ಕೆ 450 ರೂ. ಶುಲ್ಕ ಪಾವತಿಸುತ್ತಿದೆ. ಪ.ಪಂ.ನ ತ್ಯಾಜ್ಯ ವಿಲೇವಾರಿಗೆ ಬಡಗಲಹುಂಡಿಯಲ್ಲಿ ಜಾಗ ಗುರುತಿಸಲಾಗಿ ದ್ದು, ಇಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಅಳವಡಿಸಬೇಕಾಗಿದೆ. ಪ್ರಸ್ತುತ ಪ.ಪಂ.ನಲ್ಲಿ ತಲಾ ಒಂದು ಆಟೋ ಟಿಪ್ಪರ್ ಹಾಗೂ ಟ್ರಾೃಕ್ಟರ್ ಇದ್ದು, ಈಗಿನ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿಯಗಿ 8 ಆಟೋ ಟಿಪ್ಪರ್, 1 ಜೆಸಿಬಿ, 1 ಟ್ರಾೃಕ್ಟರ್, 1 ಟಿಪ್ಪರ್ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಗಾದಿ ಪಟ್ಟಣ ಪಂಚಾಯಿತಿ ಕಚೇರಿ

ವಿದ್ಯುತ್ ಬಿಲ್ ಹೊರೆ: ಪಟ್ಟಣ ಪಂಚಾಯಿತಿ ರಚನೆಗೂ ಮುನ್ನ ಇದ್ದ ಪಂಚಾಯಿತಿಗಳ ವಿದ್ಯುತ್ ಬಾಕಿ 2.50 ಕೋಟಿ ರೂ. ಇದ್ದು, ಇದನ್ನು ಮನ್ನಾ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಸರ್ಕಾರ ಪೂರಕವಾಗಿ ಸ್ಪಂದಿಸಿದೆ. ಪ್ರಸ್ತುತ ಪ್ರತಿ ತಿಂಗಳು ಪ.ಪಂ.ಗೆ ಸರಾಸರಿ 45 ಲಕ್ಷ ರೂ. ಬಿಲ್ ಬರುತ್ತಿದೆ. ಕುಡಿಯುವ ನೀರು ಪೂರೈಕೆಗೆ 46 ಕೊಳವೆ ಬಾವಿಗಳು ಇದ್ದು, ಇದರಿಂದ ಹೆಚ್ಚಿನ ಬಿಲ್ ಬರುತ್ತಿದೆ. ನಗರದ ಎಲ್ಲ ಮನೆಗಳಿಗೆ ನದಿ ಮೂಲದಿಂದ ನೀರು ಪೂರೈಕೆ ಪ್ರಾರಂಭವಾದರೆ ವಿದ್ಯುತ್ ಬಿಲ್ ಹೊರೆ ಕಡಿಮೆಯಾಗಲಿದೆ. ಬೋಗಾದಿಯ ಕೆಲವು ಭಾಗಕ್ಕೆ ಮಾತ್ರ ವಾಣಿವಿಲಾಸ ನೀರು ಸರಬರಾಜು ಕೇಂದ್ರದಿಂದ ನದಿ ಮೂಲದ ನೀರು ಪೂರೈಕೆಯಾಗುತ್ತಿದೆ. ಆದರೆ, ಉಳಿದ ಭಾಗಕ್ಕೆ ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, ಎಲ್ಲ ಮನೆಗಳಿಗೂ ಕಾವೇರಿ ಅಥವಾ ಕಬಿನಿ ನದಿ ಮೂಲದಿಂದ ನೀರು ಒದಗಿಸುವುದು ಪಟ್ಟಣ ಪಂಚಾಯಿತಿ ಮುಂದಿರುವ ಸವಾಲಾಗಿದೆ.

5 ಕೋಟಿ ವಿಶೇಷ ಅನುದಾನಕ್ಕೆ ಮನವಿ: ಪಟ್ಟಣ ಪಂಚಾಯಿತಿ ಹೊಸದಾಗಿ ರಚನೆಯಾಗಿರುವ ಹಿನ್ನೆಲೆಯಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ನೀಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಟ್ಟಣದ ಸಾಕಷ್ಟು ಕಡೆಗಳಲ್ಲಿ ರಸ್ತೆಗಳು ಹಾಳಾಗಿದ್ದು, ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಅವಶ್ಯಕತೆ ಇದೆ.
ಬೋಗಾದಿ ಪಟ್ಟಣ ಪಂಚಾಯಿತಿ ಏಪ್ರಿಲ್‌ನಿಂದ ಕಾರ್ಯಾರಂಭಗೊಂಡಿತು. ಆ ಸಂದರ್ಭ 2 ಕೋಟಿ ರೂ. ತೆರಿಗೆ ಸಂಗ್ರಹಣೆಯ ಗುರಿ ನೀಡಲಾಯಿತು. ಇದುವರೆಗೆ ಒಟ್ಟು 60 ಲಕ್ಷ ರೂ. ತೆರಿಗೆ ಸಂಗ್ರಹಿಸಲಾಗಿದೆ. ಆಸ್ತಿ ತೆರಿಗೆ, ನೀರಿನ ತೆರಿಗೆ, ಟ್ರೇಡ್ ಲೈಸನ್ಸ್ ಸೇರಿದ ಂತೆ ವಿವಿಧ ಮೂಲಗಳಿಂದ ಪಂಚಾಯಿತಿಗೆ ಅನುದಾನ ಕ್ರೋಢೀಕರಣವಾಗುತ್ತಿದ್ದು, ತೆರಿಗೆ ಸಂಗ್ರಹವಾಗುತ್ತಿದೆ.

"ಹೊಸದಾಗಿ ರಚನೆಯಾಗಿರುವ ಬೋಗಾದಿ ಪಟ್ಟಣ ಪಂಚಾಯಿತಿಯನ್ನು ಮಾದರಿ ಪ.ಪಂ.ಯಾಗಿ ಅಭಿವೃದ್ಧಿ ಪಡಿಸುವ ಗುರಿ ಹೊಂದಿದ್ದೇನೆ. ಈ ನಿಟ್ಟಿನಲ್ಲಿ ಅಗತ್ಯ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಟ್ಟಣದ ರಸ್ತೆಗಳ ಅಭಿವೃದ್ಧಿ ಹಾಗೂ ಎಲ್ಲ ಮನೆಗಳಿಗೂ ನದಿ ಮೂಲದಿಂದ ನೀರು ಒದಗಿಸುವುದು ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದು ನನ್ನ ಮುಂದಿರುವ ಗುರಿಯಾಗಿದೆ"

ಡಿ.ಎನ್. ವಿಜಯಕುಮಾರ್, ಮುಖ್ಯಾಧಿಕಾರಿ, ಬೋಗಾದಿ ಪ.ಪಂ