ಕೋಲಾರ ತಾಲೂಕು ನರಸಾಪುರ ಕೈಗಾರಿಕಾ ಪ್ರದೇಶ.  
ಜಿಲ್ಲೆ

ನರಸಾಪುರದಿಂದ ಹಾರಲಿವೆ ವಿಮಾನಗಳು |Airplan

ಮಹೇಂದ್ರ ಏರೋನಾಟಿಕ್ಸ್ ಸಂಸ್ಥೆಯಿಂದ ಸಿದ್ಧತೆ ₹3,000 ಕೋಟಿ ವೆಚ್ಚದಲ್ಲಿ ಘಟಕ ಸ್ಥಾಪನೆ

ಕೋಲಾರ: ತಾಲೂಕಿನ ನರಸಾಪುರದ ಕೈಗಾರಿಕಾ ವಲಯದಲ್ಲಿ ಮಹೇಂದ್ರ ಏರೋಸ್ಪೇಸ್ ಸಂಸ್ಥೆಯು ಹೊಸದಾಗಿ ಸುಮಾರು 3,000 ಕೋಟಿ ರೂ. ವೆಚ್ಚದಲ್ಲಿ ‘ಬೋಯಿಂಗ್ ವಿಮಾನಗಳ ತಯಾರಿಕಾ ಘಟಕ’ ಸ್ಥಾಪನೆಗೆ ಮುಂದಾಗಿದೆ.

ಅಮೆರಿಕದ ಸಂಸ್ಥೆಯೊಂದರ ಜತೆ ಬೋಯಿಂಗ್ ವಿಮಾನಗಳ ತಯಾರಿಕೆ ಸಂಬಂಧ ಒಡಂಬಡಿಕೆ ಮಾಡಿಕೊಂಡಿದ್ದು, ಈಗಾಗಲೇ ಲಘು ನಾಗರಿಕ ವಿಮಾನಗಳ ತಯಾರಿಕಾ ಘಟಕವನ್ನೂ ಇಲ್ಲಿ ತೆರೆದಿದೆ.

ಮಾಲೂರು ತಾಲೂಕು ಬಾವನಹಳ್ಳಿ ವ್ಯಾಪ್ತಿಗೆ ಸೇರಿದ ಜಮೀನಿನಲ್ಲಿ ಮಹೇಂದ್ರ ಸಂಸ್ಥೆ ಈಗಾಗಲೇ ಇರುವ ತನ್ನ ಕೈಗಾರಿಕಾ ಘಟಕದ ವಿಸ್ತರಣೆಗಾಗಿ ಬೋಯಿಂಗ್ ಕವಚ ನಿರ್ಮಾಣಕ್ಕೆ 63 ಎಕರೆ ಜಮೀನು ಮಂಜೂರಾತಿಗಾಗಿ ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಇರಿಸಿದೆ.

ಹಲವು ತಿಂಗಳಿಂದ ನನೆಗುದಿಗೆ ಬಿದ್ದಿದ್ದ ಭೂ ಮಂಜೂರಾತಿ ಕಡತಕ್ಕೆ ಒಂದು ವಾರದ ಹಿಂದಷ್ಟೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಸ್ತು ಎಂದಿದ್ದಾರೆ. ಭೂ ಮಂಜೂರಾತಿಯ ಅಧಿಕೃತ ಆದೇಶ ಹೊರ ಬೀಳಬೇಕಿದೆ ಎಂದು ತಿಳಿದುಬಂದಿದೆ.

ನರಸಾಪುರದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮಹೇಂದ್ರ ಏರೋಸ್ಪೇಸ್ ಘಟಕ.

ಅಂದಾಜು 2,000 ಮಂದಿಗೆ ಉದ್ಯೋಗಾವಕಾಶ ದೊರಕುವ ನಿರೀಕ್ಷೆ ಹೊಂದಲಾಗಿದೆ. ಮಹೇಂದ್ರ ಏರೋಸ್ಪೇಸ್ ಸಂಸ್ಥೆಯು ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಬೋಯಿಂಗ್‌ನ ಸಂಪೂರ್ಣ ವಿಮಾನ ತಯಾರಿಕಾ ಘಟಕವನ್ನು ಕೋಲಾರದ ಬಳಿ ಸ್ಥಾಪಿಸುವುದಾಗಿ 2023ರಲ್ಲಿ ಅಧಿಕೃತ ಘೋಷಣೆ ಮಾಡಿತ್ತು. ಈಗಾಗಲೇ 2021ರಿಂದ ಕಾರ್ಯನಿರ್ವಹಿಸುತ್ತಿರುವ ಮಹೇಂದ್ರ ಏರೋಸ್ಪೇಸ್ ಸಂಸ್ಥೆಯು ಸುಮಾರು 2.7 ಲಕ್ಷ ಚದರ ಅಡಿ ವಿಸ್ತೀರ್ಣದ ಏರೋಸ್ಪೇಸ್ ಉತ್ಪಾದನಾ ಘಟಕದಲ್ಲಿ ಅಲ್ಯೂಮಿನಿಯಂ, ಟೈಟಾನಿಯಂ, ಸ್ಟೀಲ್, ಇನ್ಕೊನೆಲ್ ಮುಂತಾದ ಲೋಹಗಳಿಂದ ವಿಮಾನದ ವಿವಿಧ ಭಾಗಗಳನ್ನು ತಯಾರಿಸಲಾಗುತ್ತಿದೆ. 737 ವಿಮಾನ ತಯಾರಿಸುವ ಒಪ್ಪಂದವನ್ನು 2023ರಲ್ಲಿ ಅಮೆರಿಕದ ಬೋಯಿಂಗ್ ಸಂಸ್ಥೆಯೊಂದಿಗೆ ಮಾಡಿಕೊಳ್ಳಲಾಗಿದೆ.

ಭಾರತ ಸರ್ಕಾರವು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶವನ್ನು ಏರೋಸ್ಪೇಸ್ ಮತ್ತು ರಕ್ಷಣಾ ಸಾಮಗ್ರಿಗಳ ಉತ್ಪಾದನಾ ವಲಯವಾಗಿ ಅಭಿವೃದ್ಧಿಪಡಿಸಲು ಮುಂದಾಗಿದೆ ಎನ್ನಲಾಗಿದ್ದು, ಈಗಾಗಲೇ ವೇಮಗಲ್ ಮತ್ತು ನರಸಾಪುರ ಕೈಗಾರಿಕಾ ವಲಯದಲ್ಲಿ ಟಾಟಾ ಹಾಗೂ ಮಹೇಂದ್ರ ಏರೋಸ್ಪೇಸ್ ಘಟಕಗಳ ಸ್ಥಾಪನೆ ಮಾಡಲಾಗಿದೆ.

ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ ಇರುವ ಮಹೇಂದ್ರ ಏರೋಸ್ಪೇಸ್ ಘಟಕದ ವಿಸ್ತರಣೆ ಆಗಲಿದೆ. ಬೋಯಿಂಗ್ ವಿಮಾನಗಳ ತಯಾರಿಕಾ ಘಟಕ ಸ್ಥಾಪನೆಯಿಂದ 2,000 ಮಂದಿಗೆ ಉದ್ಯೋಗಾವಕಾಶದ ನಿರೀಕ್ಷೆ ಹೊಂದಲಾಗಿದೆ. ಈ ಭಾಗದ ಡಿಪ್ಲೊಮಾ ಮತ್ತು ಐಟಿಐ ವಿದ್ಯಾರ್ಥಿಗಳಿಗೆ ಇದು ವರದಾನವಾಗಲಿದೆ.
ಮಲ್ಲೇಶ್‌ಬಾಬು, ಸಂಸದ ಕೋಲಾರ
ಮಹೇಂದ್ರ ಏರೋಸ್ಪೇಸ್ ಸಂಸ್ಥೆಯು ಹೊಸದಾಗಿ ಸುಮಾರು 3,000 ಕೋಟಿ ರೂ. ವೆಚ್ಚದಲ್ಲಿ ಬೋಯಿಂಗ್ ವಿಮಾನಗಳ ತಯಾರಿಕಾ ಘಟಕ ಸ್ಥಾಪನೆಗೆ ಮುಂದಾಗಿರುವುದು ಸ್ವಾಗತಾರ್ಹ. ಅಗತ್ಯ ಜಮೀನು ಮಂಜೂರು ಮಾಡಲು ಸರ್ಕಾರದ ಹಂತದಲ್ಲಿರುವುದರಿಂದ ಸರ್ಕಾರ ತಿರ್ಮಾನ ತೆಗೆದುಕೊಳ್ಳುತ್ತದೆ. ಇದರಿಂದ ಈ ಭಾಗದಲ್ಲಿ ಮತ್ತಷ್ಟು ಉದ್ಯೋಗಾವಕಾಶ ಸೃಜನೆಯಾಗಲಿವೆ.
- ಅನಿಲ್ ಕುಮಾರ್, ಎಂ.ಎಲ್.ಸಿ. ಕೋಲಾರ