ಶಿವಮೊಗ್ಗ: ನಗರದ ಬಿ.ಎಚ್.ರಸ್ತೆಯ ಲಾಡ್ಜ್‌ವೊಂದರದಲ್ಲಿ ಹುಬ್ಬಳ್ಳಿ ಮೂಲದ ವ್ಯಕ್ತಿಯ ಮೃತದೇಹ ಅನುಮಾಸ್ಪದವಾಗಿ ಪತ್ತೆಯಾಗಿದೆ. ಹುಬ್ಬಳ್ಳಿ ಮೂಲದ ಬಸವರಾಜ್ ಬಾಗಲಕೋಟೆ (46) ಮೃತರು.
ಶುಕ್ರವಾರ ಕೊಠಡಿ ಬಾಡಿಗೆಗೆ ಪಡೆದಿದ್ದ ಬಸವರಾಜ್ ಬಾಗಿಲು ತೆರೆದಿರಲಿಲ್ಲ. ಈ ಹಿನ್ನೆಲೆ ಸೋಮವಾರ ಬೆಳಗ್ಗೆ ಲಾಡ್ಜ್ ಸಿಬ್ಬಂದಿ ಪರಿಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ. ಬಾಗಿಲು ತೆರೆದು ಕೊಠಡಿ ಒಳಗೆ ಶೋಧಿಸಿದಾಗ ಬಾತ್‌ರೂಮ್‌ನಲ್ಲಿ ಬಸವರಾಜ್ ಅಂಗಾತವಾಗಿ ಬಿದ್ದಿದ್ದರು ಎನ್ನಲಾಗಿದೆ.
ಕೂಡಲೇ ಲಾಡ್ಜ್ ಸಿಬ್ಬಂದಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಬಸವರಾಜ್ ಶಿವಮೊಗ್ಗದ ಆಟೋಮೊಬೈಲ್‌ನಲ್ಲಿ ಎಕ್ಸಿಕ್ಯೂಟಿವ್ ಆಗಿದ್ದರು ಎಂದು ಹೇಳಲಾಗುತ್ತಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.