ಸಿಂಧನೂರು: ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಹಲವಾರು ವರ್ಷಗಳಿಂದ ಆಶ್ರಯ ಪಡೆದಿದ್ದ ತುರ್ವಿಹಾಳ ಗ್ರಾಮದ ನಾಗರಾಜ(41) ಅನಾರೋಗ್ಯದಿಂದ ಮೃತಪಟ್ಟಿದ್ದು, ನೇತ್ರ ಹಾಗೂ ದೇಹದಾನದ ಮೂಲಕ ಸಾರ್ಥಕ ಮೆರೆದಿದ್ದಾರೆ.
ಕ್ಷೌರಿಕ ಸಮಾಜ ಹಾಗೂ ಪಟ್ಟಣದ ಪ್ರಮುಖರ ಒಪ್ಪಿಗೆ ಮೇರೆಗೆ ರಾಯಚೂರಿನ ರಿಮ್ಸ್ ಮೆಡಿಕಲ್ ಕಾಲೇಜಿಗೆ ನೇತ್ರ ಹಾಗೂ ದೇಹ ದಾನ ಮಾಡುವುದರ ಮೂಲಕ ಮೃತ ದೇಹವನ್ನು ಹಸ್ತಾಂತರಿಸಲಾಯಿತು. ಆಶ್ರಮದ ಕಾರ್ಯಾಧ್ಯಕ್ಷ ಚನ್ನಬಸಯ್ಯಸ್ವಾಮಿ ಹಿರೇಮಠ ಮಾತನಾಡಿ, ಆಶ್ರಮದಲ್ಲಿ ನಾಗರಾಜ ಎಲ್ಲರ ಜತೆ ಉತ್ತಮ ಬಾಂಧವ್ಯ ಹೊಂದಿದ್ದರು. ಅನಾರೋಗ್ಯದಿಂದ ಮರಣ ಹೊಂದಿದ್ದು, ಕಾರುಣ್ಯ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ನಾಗರಾಜ ದೇಹದಾನ ಮಾಡಿ ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ ಎಂದರು. ಶ್ರೀಮಠ ಸೇವಾ ಟ್ರಸ್ಟ್ ಸದಸ್ಯೆ ಸುಜಾತಾ ಹಿರೇಮಠ, ಆಶ್ರಮದ ಸಿಬ್ಬಂದಿ ಸುಜಾತಾ ಮಲದಗುಡ್ಡ, ಜ್ಯೋತಿ, ಸಿದ್ದಯ್ಯಸ್ವಾಮಿ, ಮರಿಯಪ್ಪ, ಪ್ರಮುಖರಾದ ಸಿರಾಜ್ ಪಾಷಾ, ಶಂಕರ, ಶರಣಪ್ಪ, ಚಿದಾನಂದ, ವೆಂಕಟೇಶ, ಬಸವರಾಜ, ಮೌನೇಶ, ರಾಜು, ಚನ್ನಮ್ಮ, ವೀರೇಶ ಇತರರಿದ್ದರು.