ಗೋಕರ್ಣ: ಯುಕ್ತವಾದ ದಿನಚರ್ಯೆಯಿಂದ ದೇವರು ನಮಗಿತ್ತ ದೊಡ್ಡ ವರ ಶರೀರದ ಜೋಪಾನವಾಗುತ್ತದೆ. ಅಂತೆಯೇ ಕಾಲದ ಮತ್ತೊಂದು ಮುಖವಾದ ಆಯುರ್ವೇದದಿಂದ ಆಯಸ್ಸು ಎಂಬ ನಿಧಿಯ ಪಾಲನೆಯಾಗುತ್ತದೆ ಎಂದು ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಅಶೋಕೆಯ ಗುರುದೃಷ್ಟಿ ಭವನದಲ್ಲಿ 32ನೆ ಸ್ವಭಾಷಾ ಚಾತುರ್ಮಾಸ್ಯ ಆಚರಣೆಯಲ್ಲಿ ಆಯುರ್ವೇದ ಶಾಸ್ತ್ರದ ಕುರಿತ ಪ್ರವಚನ ನೀಡಿದರು. ದೇವದೇವನು ದಯದಿಂದ ಕಾಲವೆಂಬ ಅಮೃತವನು ಜೀವಿಗಳಿಗಿತ್ತನು. ಆ ಅಮೃತವೇ ಆಯುಷ್ಯ ನಿಧಿ. ಈ ಆಯುಷ್ಯವನ್ನು ಸಮರ್ಥವಾಗಿ ಸಂರಕ್ಷಿಸಿಕೊಳ್ಳುವುದಕ್ಕಾಗಿಯೇ ಆಯುರ್ವೇದ ಶಾಸ್ತ್ರವಿದೆ. ನಮ್ಮ ಆಯಸ್ಸನ್ನು ಉಳಿಸಿಕೊಳ್ಳುವುದು, ಬೆಳೆಸಿಕೊಳ್ಳುವುದು, ಮತ್ತು ಕಳೆದುಕೊಳ್ಳುವುದು ನಮ್ಮ ಕೈಯ್ಯಲ್ಲಿದೆ. ಆಯುರ್ವೇದ ನಿರೋಗಿಯಾದವನ ಸ್ವಸ್ಥ ಗುಣ ಲಕ್ಷಣಗಳನ್ನು ಉಲ್ಲೇಖಿಸಿದೆ. ಅರುಚಿಯಿಂದ ಮುಕ್ತನಾಗಿ ಅನ್ನಾಭಿಲಾಷೆಯಿಂದ, ಉಂಡಿದ್ದು ಸಮರ್ಪಕವಾಗಿ ಜೀರ್ಣಿಸಬಲ್ಲ ಜಠರ ಸಮಾಗ್ನಿಯಿಂದ, ಜೀರ್ಣಿಸಿದ ನಂತರ ಶರೀರಕ್ಕೆ ಬೇಡವಾದುದು ಸಮರ್ಪಕವಾಗಿ ವಿಸರ್ಜಿತವಾಗುವ ಕ್ರಿಯೆಗಳಿಂದ, ಹಗುರವಾದ ಸೌಮನಸ್ಯನಾಗಿ ಸುಖ ನಿದ್ರೆ ಪಡೆದು, ಪಂಚೇಂದ್ರಿಯಗಳು ಪ್ರಸನ್ನವಾಗಿರಬೇಕು ಎಂದರು.
ಸ್ವಾಸ್ಥ್ಯಕ್ಕೆ ನಮ್ಮ ದಿನಚರ್ಯೆ, ರಾತ್ರಿಚರ್ಯೆ, ಋತುಚರ್ಯೆಗಳು ಯುಕ್ತವಾಗಿ ಪಾಲನೆಯಾಗಬೇಕು. ಸ್ವಸ್ಥವೃತ್ತ ಸರಿಯಾಗಿ ಪಾಲಿತವಾದರೆ ಆರೋಗ್ಯದ ಸಂರಕ್ಷಣೆ ಮತ್ತು ಸಂವರ್ಧನೆ ಸಾಧ್ಯ ಎಂದರು.
ಅಂಬಾಗಿರಿ, ಹರೀಶೆ, ಮಂಗಳೂರು, ಹಾರ್ಸಿಕಟ್ಟೆ, ಬಿದ್ರಕಾನು ಮತ್ತು ಸಿದ್ದಾಪುರ ವಲಯಗಳ ಶಿಷ್ಯಭಕ್ತರಿಂದ ಚಾತುರ್ಮಾಸ್ಯ ಸರ್ವಸೇವೆ ಸಮರ್ಪಿತವಾಯಿತು. ಧರ್ಮಸಭೆಯಲ್ಲಿ ಸಿದ್ದಾಪುರ ಮಂಡಲದ ನೂತನ ಅಧ್ಯಕ್ಷರಾಗಿ ಸತೀಶ ಆಲ್ಮನೆ, ಕಾರ್ಯದರ್ಶಿಯಾಗಿ ರಾಮಮೂರ್ತಿ ಗೋಳಗೋಡು ಮತ್ತು ಇತರ ಪದಾಧಿಕಾರಿಗಳು ಸೇವಾದೀಕ್ಷೆ ಸ್ವೀಕರಿಸಿದರು. ವೇ.ಪರಮೇಶ್ವರ ಮಾರ್ಕಾಂಡೆ ನೇತೃತ್ವದಲ್ಲಿ ಕುಮಟಾ-ಹೊನ್ನಾವರ ಮಂಡಲಗಳ ಶಿಷ್ಯರಿಂದ ಲಕ್ಷ ತುಳಸಿ ಅರ್ಚನೆ ನಡೆಯಿತು. ಅಶೋಕೆಯ ವೈಭವಗಳನ್ನು ಬಣ್ಣಿಸುವ ಪ್ರವಾಸಿ ಪ್ರಪಂಚ ಸಂಚಿಕೆಯನ್ನು ಶ್ರೀಗಳು ಬಿಡುಗಡೆ ಮಾಡಿದರು. ಸಭೆಯಲ್ಲಿ ಹವ್ಯಕ ಮಹಾಮಂಡಲದ ಪ್ರ.ಕಾರ್ಯದರ್ಶಿ ಮಹೇಶ ಚಟ್ನಳ್ಳಿ, ಯುವ ಪ್ರಧಾನ ಚಂದನ ಶಾಸ್ತ್ರಿ, ಆಡಳಿತಾಧಿಕಾರಿ ಡಾ.ಪ್ರಸನ್ನಕುಮಾರ, ಲೋಕ ಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಚಾತುರ್ಮಾಸ್ಯ ಪ್ರ.ಸಂಚಾಲಕ ಮಂಜುನಾಥ ಸುವರ್ಣಗದ್ದೆ, ಕುಮಟಾ ಮಂಡಲಾಧ್ಯಕ್ಷ ಸುಬ್ರಾಯ ಭಟ್ಟ, ಹೊನ್ನಾವರ ಅಧ್ಯಕ್ಷ ಆರ್.ಜಿ.ಹೆಗಡೆ ಇತರರಿದ್ದರು.
24ಜಿಕೆಎನ್1-
ಗೋಕರ್ಣದಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳಿಗೆ ಸಿದ್ದಾಪುರ ಮಂಡಲದ ವತಿಯಿಂದ ಗುರುವಾರ ಸರ್ವಸೇವೆ ನಿಮಿತ್ತ ಪೂರ್ಣಫಲ ಸಮರ್ಪಣೆ ನಡೆಯಿತು.