ಜಿಲ್ಲೆ

ನೀರುಪಾಲಾಗಿದ್ದ ಯುವಕರ ಮೃತದೇಹ ಪತ್ತೆ

ಸೋಮವಾರಪೇಟೆ : ಗುರು ಶ್ರೀ ರಾಘವೇಂದ್ರ ಸ್ವಾಮಿಯ ಪುಣ್ಯಕ್ಷೇತ್ರ ಮಂತ್ರಾಲಯಕ್ಕೆ ಸ್ನೇಹಿತರೊಂದಿಗೆ ತೆರಳಿ ಸ್ನಾನಘಟ್ಟದಲ್ಲಿ ನೀರುಪಾಲಾಗಿದ್ದ ಕೊಡಗಿನ ಯುವಕ ಸೇರಿದಂತೆ ಮೂವರು ಯುವಕರ ಮೃತದೇಹಗಳು ಪತ್ತೆಯಾಗಿವೆ.

ಸೋಮವಾರಪೇಟೆ ತಾಲೂಕಿನ ಆಲೂರುಸಿದ್ದಾಪುರ ಸಮೀಪದ ಸಂಗಯ್ಯನಪುರ ಗ್ರಾಮದ ಕೃಷಿಕ ರಮೇಶ್ ಹಾಗೂ ಇಂದಿರಾ ದಂಪತಿ ಪುತ್ರ ಕೆ.ಆರ್. ಅಜಿತ್ (20), ಹಾಸನ ಅರಸೀಕೆರೆಯ ಪ್ರಮೋದ್, ಸಚಿನ್ ಮೃತರು.

ಹಾಸನದ ಸರ್ಕಾರಿ ಕಲಾ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದ ಅಜಿತ್ ಜು.11 ರಂದು ಹಾಸನದಿಂದ ಮಂತ್ರಾಲಯಕ್ಕೆ ಪ್ರವಾಸ ತೆರಳಿದ್ದ 7 ಜನ ಸ್ನೇಹಿತರ ತಂಡದೊಂದಿಗೆ ತೆರಳಿದ್ದ. ಶನಿವಾರ ದಿನ ಮಂತ್ರಾಲಯದ ತುಂಗ ಭದ್ರಾ ನದಿಯ ಸ್ನಾನಘಟ್ಟಕ್ಕೆ ಪ್ರಮೋದ್, ಸಚಿನ್‌ರೊಂದಿಗೆ ಇಳಿದಿದ್ದು, ಆಕಸ್ಮಿಕವಾಗಿ ಆಯತಪ್ಪಿ ಮೂವರೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.

ಸ್ಥಳೀಯ ಪೊಲೀಸರು ಹಾಗೂ ಈಜುಗಾರರ ತಂಡ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಭಾನುವಾರ ಬೆಳಗ್ಗೆ ಎನ್‌ಡಿಆರ್‌ಎಫ್ ತಂಡದೊಂದಿಗೆ ಸ್ಥಳೀಯರು ನದಿಯಲ್ಲಿ ಹುಡುಕಾಟ ನಡೆಸಿದ ಸಂದರ್ಭ ಮೃತದೇಹಗಳು ಪತ್ತೆಯಾಗಿವೆ. ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಮೊಕದ್ದಮೆ ದಾಖಲಾಗಿದೆ.

ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಹೆಚ್ಚಿನ ಮುತುವರ್ಜಿ ವಹಿಸಿ, ಉಸ್ತುವಾರಿ ಸಚಿವರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಕಾರ್ಯಾಚರಣೆ ಚುರುಕುಗೊಳಿಸಲು ಸಹಕರಿಸಿದ್ದಾರೆ. 14ರ ಸೋಮವಾರ ಸಂಗಯ್ಯನಪುರದಲ್ಲಿ ಮೃತ ಅಜಿತ್ ಅಂತ್ಯಕ್ರಿಯೆ ನಡೆಯಿತು.