ಜಿಲ್ಲೆ

ಭೀಮಕೋಲ್‌ ಕೆರೆಯಲ್ಲಿ ಬೋಟಿಂಗ್‌ ಪ್ರಾರಂಭ

Uttara Kannada - Subash Hegde

ಕಾರವಾರ: ಹಣಕೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೀಮಕೋಲ್ ಕೆರೆಯಲ್ಲಿ ಬೋಟಿಂಗ್ ಪ್ರಾರಂಭಿಸಲಾಗಿದೆ. ಈ ಹಿಂದೆ ಸಾಮಾಜಿಕ ಅರಣ್ಯ ವಿಭಾಗದಿಂದ ಕೆರೆಯನ್ನು ಅಭಿವೃದ್ಧಿ ಮಾಡಲಾಗಿತ್ತು. ಅಲ್ಲಿ ಉದ್ಯಾನ ನಿರ್ಮಾಣ ಮಾಡಲಾಗಿತ್ತು. ಈಗ ಕೆರೆಯಲ್ಲಿ ಬೋಟಿಂಗ್ ಕೂಡ ಪ್ರಾರಂಭಿಸಿದ್ದರಿಂದ ಇನ್ನಷ್ಟು ಪ್ರವಾಸಿಗರನ್ನು ಸೆಳೆಯುವಂತಾಗಿದೆ.

ಸಣ್ಣ ನೀರಾವರಿ ಇಲಾಖೆಯ ಕೆರೆಯನ್ನು ಜಿಲ್ಲಾ ಪಂಚಾಯಿತಿ ಅಮೃತ ಸರೋವರ ಯೋಜನೆಯಡಿ, ಸಾಮಾಜಿಕ ಅರಣ್ಯ ವಿಭಾಗದಿಂದ ಸುಮಾರು 37 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿತ್ತು. ಸಾಕಷ್ಟು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿತ್ತು. ಈಗ ಅದಕ್ಕೆ ಇನ್ನಷ್ಟು ಮೆರಗು ನೀಡಲಾಗಿದೆ. ಜಿಲ್ಲಾ ಪಂಚಾಯಿತಿ ಅನಿರ್ಬಂಧಿತ ನಿಧಿಯಿಂದ ಸಾಮಾಜಿಕ ಅರಣ್ಯ ವಿಭಾಗದಿಂದ ಭೀಮಕೋಲ್‌ನಲ್ಲಿ ಶೌಚಗೃಹ ಹಾಗೂ ಸ್ನಾನ ಗೃಹವನ್ನು ನಿರ್ಮಾಣ ಮಾಡಲಾಗಿದೆ. ಸದ್ಯ ಬೀಮಕೋಲ್ ಕೆರೆ ನಿರ್ವಹಣಾ ಸಮಿತಿ ರಚಿಸಲಾಗಿದ್ದು, ಉದ್ಯಾನ ಪ್ರವೇಶಕ್ಕೆ ನಿರ್ವಹಣಾ ಶುಲ್ಕ ಪಡೆಯಲಾಗುತ್ತಿದೆ. ಇನ್ನು ಬೋಟಿಂಗ್‌ಗೆ ಟೆಂಡರ್ ಕರೆದು ಖಾಸಗಿಗೆ ವಹಿಸಲಾಗಿದೆ. ತಾಸಿನ ಲೆಕ್ಕದಲ್ಲಿ ಶುಲ್ಕ ಆಕರಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಹಾಗೂ ಸಾಮಾಜಿಕ ಅರಣ್ಯ ವಿಭಾಗದ ಡಿಎಫ್‌ಒ ಮಂಜುನಾಥ ನಾವಿ ತಿಳಿಸಿದ್ದಾರೆ.

ತೂಗು ಸೇತುವೆ ನಿರ್ಮಾಣ

ಬುಧವಾರ ಶಾಸಕ ಸತೀಶ ಸೈಲ್ ಅವರು ಭೀಮಕೋಲ್ ಬೋಟಿಂಗ್ ವ್ಯವಸ್ಥೆಗೆ ಚಾಲನೆ ನೀಡಿದರು. ಭೀಮಕೋಲ್‌ನಲ್ಲಿ ಪೆಡಲ್ ಬೋಟಿಂಗ್ ಹಾಗೂ ತೂಗು ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು. ಕಾರವಾರ ತಾಪಂ ಇಒ ವೀರಣಗೌಡ ಏಗನಗೌಡರ್ ಎಸಿಎಫ್ ಕೆ.ಡಿ.ನಾಯ್ಕ, ಹಣಕೋಣ ಗ್ರಾಪಂ ಅಧ್ಯಕ್ಷ ಶಾಂತಾರಾಮ ತಾಮ್ಸೆ ಇದ್ದರು.