ಜಿಲ್ಲೆ

ಮಲ್ಪೆಯ ಬೋಟು ಗೋವಾದಲ್ಲಿ ಮುಳುಗಡೆ

Udupi

ಉಡುಪಿ: ಮಲ್ಪೆಯ ಆಳಸಮುದ್ರ ಮೀನುಗಾರಿಕೆ ಬೋಟ್ ಮಂಗಳವಾರ ಗೋವಾ ಸಮೀಪ ಮುಳುಗಡೆಗೊಂಡಿದೆ. ಬೋಟಿನಲ್ಲಿದ್ದ ಎಲ್ಲ ಏಳು ಮಂದಿಯನ್ನು ಮತ್ತೊಂದು ಬೋಟಿನ ಮೀನುಗಾರರು ರಕ್ಷಿಸಿದ್ದಾರೆ.

ಮಲ್ಪೆ ವಡಭಾಂಡೇಶ್ವರದ ದೀಪಿಕಾ ಎಂಬುವರಿಗೆ ಸೇರಿದ ಶ್ರೀ ದುರ್ಗಾ ಹನುಮ ಆಳಸಮುದ್ರ ಬೋಟ್ ಮೇ 23ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಮಹಾರಾಷ್ಟ್ರದಲ್ಲಿ ಮೀನುಗಾರಿಕೆ ನಡೆಸಿ ಹಿಂದಿರುಗುತ್ತಿದ್ದಾಗ ಗೋವಾ ಸಮೀಪದ ರೆಡ್‌ಹೌಸ್ ಬಳಿ ಸಮುದ್ರದಲ್ಲಿ ಸುಮಾರು 27 ನಾಟಿಕಲ್ ಮೈಲು ದೂರದಲ್ಲಿ ಮಧ್ಯಾಹ್ನ 2 ಗಂಟೆಯ ವೇಳೆಗೆ ಅವಘಡ ಸಂಭವಿಸಿದೆ. ಗಾಳಿಯ ರಭಸಕ್ಕೆ ೈಬರ್ ಒಡೆದು ನೀರು ಬೋಟಿನ ಒಳ ಸೇರಿ ಮುಳುಗಲಾರಂಭಿಸಿತು. ಅದರಲ್ಲಿದ್ದ ಮೀನುಗಾರರು ಕೂಡಲೇ ಬೇರೆ ಬೋಟಿನವರೆಗೆ ಮಾಹಿತಿ ನೀಡಿದರು. ಸಮೀಪದಲ್ಲಿದ್ದ ಶಿವಭೈರವ ಬೋಟಿನವರು ರಕ್ಷಿಸಿ ದಡ ಸೇರಿಸಿದ್ದಾರೆ.

ಬೋಟಿನಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರಾದ ಕೇಶವ ಮಾದೇವ ಮೊಗೇರ, ನಾಗರಾಜ್ ಈಶ್ವರ ಮೊಗೇರ, ರಾಮಚಂದ್ರ ನಾರಾಯಣ ನಾಯ್ಕ, ಈಶ್ವರ ವೆಂಕಟರಮಣ ಹರಿಕಾಂತ್ರ, ದಿನೇಶ್ ಜಟ್ಟ ಮೊಗೇರ, ಗುರುರಾಜ್ ಮಂಜುನಾಥ ಮೊಗೇರ, ಚಿದಂಬರ ಗಣಪತಿ ಹರಿಕಾಂತ್ರ ಅವರನ್ನು ರಕ್ಷಿಸಲಾಗಿದೆ. ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ಮೀನು, ಡಿಸೇಲ್ ಸಮುದ್ರ ಪಾಲಾಗಿದೆ. ಸುಮಾರು 60 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.