ಭಟ್ಕಳ: ಮೀನುಗಾರಿಕೆಗೆ ತೆರಳಿದ ದೋಣಿ ಮಗುಚಿ ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದ ದುರಂತಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯ ಮುಂದುವರಿದಿದೆ. ಈ ಪೈಕಿ ಒಬ್ಬರ ಶವ ಗುರುವಾರ ಪತ್ತೆಯಾದ ಬೆನ್ನಲ್ಲೇ, ಉಳಿದವರಿಗಾಗಿ ಉಡುಪಿ ಮಲ್ಪೆ ಮೂಲದ ಮುಳುಗುತಜ್ಞ ಈಶ್ವರ ಮಲ್ಪೆ ನೇತೃತ್ವದ ಐದು ಮಂದಿ ತಂಡ ಭಟ್ಕಳಕ್ಕೆ ಆಗಮಿಸಿದ್ದು, ಶೋಧ ಕಾರ್ಯ ಆರಂಭಿಸಲಾಗಿದೆ.</p><p>ಸ್ಥಳಕ್ಕೆ ಭೇಟಿ ನೀಡಿದ ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ ಕಲ್ಲೇರ ಹಾಗೂ ಈಶ್ವರ ಮಲ್ಪೆ ಅವರು ಸ್ಥಳೀಯ ಮೀನುಗಾರ ಮುಖಂಡರೊಂದಿಗೆ ಚರ್ಚೆ ನಡೆಸಿ ಕಾರ್ಯ ಯೋಜನೆ ರೂಪಿಸಿದ್ದಾರೆ.
ಮತ್ತೊಬ್ಬನ ಶವ ಪತ್ತೆ: ಭಟ್ಕಳ ತಾಲೂಕಿನ ತೆಂಗಿನಗುಂಡಿ ಬಂದರಿನಲ್ಲಿ ನಡೆದ ದೋಣಿ ದುರಂತದಲ್ಲಿ ಕಣ್ಮರೆಯಾದವರಲ್ಲಿ ಮತ್ತೋರ್ವನ ಶವ ಉಡುಪಿ ಜಿಲ್ಲೆಯ ಗಂಗೊಳ್ಳಿ ಕಡಲಿನಲ್ಲಿ ಪತ್ತೆಯಾಗಿದೆ. ಪತ್ತೆಯಾದವರನ್ನುಗಣೇಶ ಮೊಗೇರ ಎಂದು ಗುರುತಿಸಲಾಗಿದೆ. ಆತನ ಶವವನ್ನು ಭಟ್ಕಳಕ್ಕೆ ತಂದು ಮುಂದಿನ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ತಾಲೂಕಾಡಳಿತ ತಿಳಿಸಿದೆ.
ಡ್ರೋನ್ ಬಳಸಿ ಸಮುದ್ರದಲ್ಲಿ ಹುಡುಕಾಟ
ಬುಧವಾರ ಇಲ್ಲಿನ ತೆಂಗಿನಗುಂಡಿ ಅಳಿವೆ ದುರಂತದಲ್ಲಿ ಕಣ್ಮರೆಯಾದವರ ಪತ್ತೆಗಾಗಿ ಡ್ರೋನ್ ಬಳಸಿ ಸಮುದ್ರದಲ್ಲಿ ಶನಿವಾರ ಹುಡುಕಾಟ ನಡೆಸಲಾಯಿತು. ಮೀನುಗಾರರು ಡ್ರೋನ್ಗಳನ್ನು ತಂದು ತೆಂಗಿನಗುಂಡಿಯಿಂದ ಹೊನ್ನೆಗದ್ದೆ ಹೆರ್ತಾರ್ವರೆಗೂ ದೃಷ್ಟಿ ಹಾಯಿಸಿದರು. ಎಲ್ಲಿಯೂ ಪತ್ತೆಯಾಗಲಿಲ್ಲ. ಬಳಿಕ ಧರ್ಮಸ್ಥಳದಲ್ಲಿ ಬಳಸುತ್ತಿದ್ದ ಕರಾವಳಿ ಕಾವಲು ಪಡೆ ಆಂತರಿಕ ಭದ್ರತಾ ವಿಭಾಗದ ಅತ್ಯಾಧುನಿಕ ನೇತ್ರ ವಿ-3 ಡ್ರೋನ್ ಅನ್ನು ತೆಂಗಿನಗುಂಡಿಗೆ ತರಿಸಿಕೊಳ್ಳಲಾಯಿತು.
ತೆಂಗಿನಗುಂಡಿ ಬಂದರಿನಿಂದ ಡ್ರೋನ್ ಸಿದ್ದು ಹಾರಿ ಬಿಡಲಾಯಿತಾದರೂ ಕೆಲ ನಿಮಿಷ ಸುರಿದ ಮಳೆ ಕಾರ್ಯಾಚರಣೆಗೆ ಹಿನ್ನೆಡೆಯನ್ನುಂಟು ಮಾಡಿತು. ರಾಜ್ಯ ಆಂತರಿಕ ಭದ್ರತಾ ವಿಭಾಗದ ಬತ್ತಳಿಕೆಯಲ್ಲಿರುವ ಈ ನೇತ್ರ ವಿ -3 ಡ್ರೋನ್ 5 ಕಿಮೀ ವ್ಯಾಪ್ತಿಯವರೆಗೆ ಕ್ರಮಿಸಿ ದೃಶ್ಯಗಳನ್ನು ಸ್ಪಷ್ಟವಾಗಿ ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ.
ಶೋಧ ಕಾರ್ಯಾಚರಣೆ ವೇಳೆ ಕರಾವಳಿ ಕಾವಲುಪಡೆ ಎಸ್ಐ ವೀಣಾ ಚಿತ್ರಾಪುರ, ಎಎಸ್ಐ ರವಿ ನಾಯ್ಕ, ಸಿಎಸ್ಪಿ ಗುಪ್ತವಾರ್ತೆ ಹವಾಲ್ದಾರ್ ರಾಜೇಶ್ ಭಂಡಾರಿ, ರಾಘವೇಂದ್ರ ಶೇರುಗಾರ ಉಪಸ್ಥಿತರಿದ್ದರು.