ಜಿಲ್ಲೆ

ಬೋಟ್ ಮೇಲಕ್ಕೆತ್ತುವ ಕಾರ್ಯಾಚರಣೆ ಆರಂಭ

Dakshina Kannada

ಮಂಗಳೂರು: ಶ್ರೀರಕ್ಷಾ ಎಂಬ ದೋಣಿ ದುರಂತದಲ್ಲಿ ನೀರುಪಾಲಾದ ಕಸ್ಬ ಬೆಂಗ್ರೆಯ ಅನ್ಸಾರ್(31) ಇನ್ನೂ ಪತ್ತೆಯಾಗಿಲ್ಲ. ಇದಕ್ಕಾಗಿ ಮುಳುಗಿದ ದೋಣಿಯನ್ನು ಮೇಲೆತ್ತಿ ಮುಳುಗಡೆಯಾದ ಸ್ಥಳದಲ್ಲಿ ಪರಿಶೀಲಿಸಬೇಕಿದೆ. ಸೋಮೇಶ್ವರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾರ್ಜ್‌ನ ಸಹಾಯ ಪಡೆದು ಕಾರ್ಯಾಚರಣೆ ನಡೆಸಬಹುದು ಎಂದು ಮೀನುಗಾರ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಲ್ಲಿ ವಿಷಯ ಪ್ರಸ್ತಾವಿಸಿದ್ದರು. ಸಮುದ್ರದ 30 ಅಡಿ ಆಳದಲ್ಲಿ ಬೋಟ್ ಇದೆ ಎಂದು ಮುಳುಗು ತಜ್ಞರು ತಿಳಿಸಿದ್ದಾರೆ. ಹೀಗಾಗಿ ಇದನ್ನು ಮೇಲಕ್ಕೆತ್ತುವ ಬಗ್ಗೆ ಸೋಮೇಶ್ವರದಲ್ಲಿ ಎಡಿಬಿ ಕಾಮಗಾರಿ ನಡೆಸುತ್ತಿರುವ ಬಾರ್ಜ್ ಹಾಗೂ ಅದರಲ್ಲಿರುವ ಕ್ರೇನ್ ತರಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರೂ ತಿಳಿಸಿದ್ದರು.

ಆದರೆ ಬಾರ್ಜ್ 15 ಟನ್ ಮಾತ್ರ ಭಾರ ಎತ್ತುವ ಸಾಮರ್ಥ್ಯ ಹೊಂದಿರುವುದರಿಂದ, ಧರತಿ ಎಂಬ ಟಗ್ ಬಳಸಲು ನಿರ್ಧರಿಸಲಾಯಿತು. ಅದರಂತೆ ಗುರುವಾರ ಮಧ್ಯಾಹ್ನವೇ ಧರತಿ ಟಗ್ ಜತೆಗೆ ಕರಾವಳಿ ಕಾವಲು ಪೊಲೀಸ್ ಪಡೆಯ ಸಿಬ್ಬಂದಿ, ಮುಳುಗು ತಜ್ಞರು, ಪರ್ಸಿನ್ ಬೋಟುಗಳು ದುರ್ಘಟನೆ ನಡೆದ ಸಮುದ್ರದ ಪ್ರದೇಶಕ್ಕೆ ತೆರಳಿವೆ. ಸಂಜೆವರೆಗೂ ಕಾರ‌್ಯಾಚರಣೆ ನಡೆಸಿದರೂ ಅನ್ಸಾರ್ ಮೃತದೇಹ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಮೀನುಗಾರಿಕೆಗೆ ಬಳಸಿದ್ದ ಬಲೆಯನ್ನು ಬಹುತೇಕ ಮೇಲಕ್ಕೆ ಎಳೆಯಲಾಗಿದೆ. ಮುಳುಗಡೆಯಾದ ಬೋಟು ಸಮುದ್ರದ ತಳಮುಟ್ಟಿದ್ದು, ಶುಕ್ರವಾರ ಕಾರ‌್ಯಾಚರಣೆ ಮುಂದುವಯಲಿದೆ.

ನಾಪತ್ತೆಯಾದ ಮೀನುಗಾರ ಬೋಟಿನೊಳಗೆ ಸಿಲುಕಿರಬಹುದು ಅಥವಾ ಸಮುದ್ರದ ಮರಳು ಮಿಶ್ರಿತ ಕೆಸರಿನಲ್ಲೂ ಸಿಲುಕಿರುವ ಸಾಧ್ಯತೆ ಇದೆ ಎಂದು ಪರ್ಸಿನ್ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ಶಶಿಕುಮಾರ್ ಬೆಂಗ್ರೆ ತಿಳಿಸಿದ್ದಾರೆ.

ಮುಳುಗಿದ ಬೋಟ್ ಅಪಾಯಕಾರಿ

ಸಮುದ್ರದಲ್ಲಿ ಮುಳುಗಿರುವ ಬೋಟ್ ಮೇಲಕ್ಕೆ ತೆಗೆಯದಿದ್ದರೆ ಮೀನುಗಾರಿಕೆ ನಡೆಸುವ ಇತರ ಮೀನುಗಾರರಿಗೆ ಸಮಸ್ಯೆಯಾಗಲಿದೆ. ಮುಂದಿನ ದಿನಗಳಲ್ಲಿ ಈ ವ್ಯಾಪ್ತಿಯಲ್ಲಿ ಮೀನುಗಾರಿಕಾ ಬೋಟುಗಳು ಹೋದಾಗ ಬೋಟಿನ ಭಾಗಗಳು ತಾಗಿ ದುರಂತ ಸಂಭವಿಸುವ ಸಾಧ್ಯತೆಯಿದೆ. ಆದ್ದರಿಂದ ಶೀಘ್ರ ತೆರವು ಮಾಡಬೇಕು ಎಂಬುದು ಮೀನುಗಾರರ ಒತ್ತಾಯ.

ಮೀನು ದರ ಕುಸಿತ: ಮಂಗಳೂರಿನಲ್ಲಿ ಬೋಟ್ ದುರಂತದಿಂದ ಮೃತಪಟ್ಟ ಮೀನುಗಾರರ ಶೋಕಾಚರಣೆ ಕಾರಣದಿಂದ ಬುಧವಾರ ದಕ್ಕೆಯಲ್ಲಿ ಮೀನು ವ್ಯವಹಾರ ನಡೆದಿರಲಿಲ್ಲ. ನಗರದ ಮೀನು ಮಾರುಕಟ್ಟೆಗಳು ಪೂರ್ಣ ಬಂದ್ ಆಗಿತ್ತು. ಮೀನುಗಾರಿಕೆ ಮುಗಿಸಿ ದಕ್ಕೆಗೆ ಬಂದ ಬೋಟುಗಳಿಂದ ಮೀನು ಅನ್‌ಲೋಡ್ ಮಾಡಿಲ್ಲ. ಇದರ ಜತೆಗೆ ಈ ಹಿಂದೆ ಹೋಗಿದ್ದ ಮೀನುಗಾರಿಕಾ ಬೋಟುಗಳು ಗುರುವಾರ ಧಕ್ಕೆಗೆ ಬಂದ ಪರಿಣಾಮ ಮೀನಿನ ಪೂರೈಕೆ ಹೆಚ್ಚಾಗಿ ಮೀನು ಮಾರುಕಟ್ಟೆಯಲ್ಲಿ ಮೀನಿನ ದರ ಏಕಾಏಕಿ ಕಡಿಮೆಯಾಗಿತ್ತು. ಹಾಗಾಗಿ ಗ್ರಾಹಕರು, ಹೋಟೆಲ್‌ನವರು ಮಾರುಕಟ್ಟೆಗಳಿಂದ ವಾರಕ್ಕೆ ಬೇಕಾಗುವಷ್ಟು ಮೀನು ಖರೀದಿಸಿದ್ದಾರೆ.

ಇಂದು ಪರಿಹಾರ ಮೊತ್ತ ಖಾತೆಗೆ

ಪಾಂಡುರಂಗ ಸುವರ್ಣ, ಪ್ರೀತಂ, ಚಿಂತನ್, ಹಸೈನಾರ್, ಝಿಯಾದ್(ಜಿಯಾವುಲ್ಲ) ಹಾಗೂ ಅನ್ಸಾರ್ ಅವರ ಕುಟುಂಬಸ್ಥರಿಗೆ ಪರಿಹಾರ ಧನದ ಮಂಜೂರಾತಿ ಪತ್ರವನ್ನು ಸಚಿವರು ವಿತರಿಸಿದರು. ಈ ಮೊತ್ತ ಶುಕ್ರವಾರ ಆರ್‌ಟಿಜಿಎಸ್ ಮೂಲಕ ಸಂತ್ರಸ್ತರ ಖಾತೆಗೆ ವರ್ಗಾವಣೆಯಾಗಲಿದೆ. ಅನ್ಸಾರ್ ಮರಳಿ ಬಂದರೆ ಈ ಮೊತ್ತವನ್ನು ಇಲಾಖೆಗೆ ಮರುಪಾವತಿ ಮಾಡುತ್ತೇವೆ ಎಂದು ಷರತ್ತು ಪತ್ರದಲ್ಲಿ ನಮೂದಿಸಲಾಗಿದೆ. ಕೆಲವು ಮೀನುಗಾರರ ಮನೆಯವರ ಬ್ಯಾಂಕ್ ಖಾತೆಗಳಲ್ಲಿ ಸಮಸ್ಯೆ ಇದ್ದು, ಸರಿಪಡಿಸಿ ಮೊತ್ತ ವರ್ಗಾವಣೆ ಮಾಡಲಾಗುತ್ತಿದೆ ಎಂದು ಮೀನುಗಾರಿಕಾ ಉಪನಿರ್ದೇಶಕ ಪಾರ್ಶ್ವನಾಥ್ ತಿಳಿಸಿದ್ದಾರೆ.