ಚನ್ನರಾಯಪಟ್ಟಣ: ವೇಗವಾಗಿ ಬೆಳೆಯುತ್ತಿರುವ ಪಟ್ಟಣಕ್ಕೆ ತುರ್ತು ಅಗತ್ಯವಿದ್ದ ಒಳಚರಂಡಿ ಕಾಮಗಾರಿಗೆ ಮಂಡಳಿಯಿಂದ ಅನುಮೋದನೆ ದೊರೆತಿದ್ದು, ಬಹು ದಿನದ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ವಾರ್ಡ್ ನಂ.1ರಲ್ಲಿನ ಅಂಬಿಕಾ ನಗರದಲ್ಲಿ ಗುರುವಾರ ಈ ಭಾಗದ ನಿವಾಸಿಗಳಿಗೆ ಹೇಮಾವತಿ ನದಿ ನೀರು ಸರಬರಾಜು ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಳೆಯ ಒಳಚರಂಡಿ ಕಾಮಗಾರಿಯಿಂದ ಪೈಪ್ ಶಿಥಿಲವಾಗಿವೆ. ಅಧಿಕ ಸಂಖ್ಯೆಯಲ್ಲಿ ಮ್ಯಾನ್‌ಹೋಲ್‌ಗಳಿದ್ದು, ಅವುಗಳು ದುಸ್ಥಿತಿಯಲ್ಲಿವೆ. ಹೀಗಾಗಿ ಇರುವ ಒಳಚರಂಡಿಯಲ್ಲಿ ತ್ಯಾಜ್ಯ ಸರಾಗವಾಗಿ ಹರಿಯದಂತಾಗಿದೆ. ಮಳೆಗಾಲದಲ್ಲಂತೂ ಮ್ಯಾನ್‌ಹೋಲ್ ಮೂಲಕ ಕೊಳಚೆ ನೀರು ಹೊರ ಬರುತ್ತಿದೆ. 50 ವರ್ಷಗಳ ದೂರದೃಷ್ಟಿಯಿಟ್ಟುಕೊಂಡು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಭಾಗದಲ್ಲಿ ವೆಟ್‌ವೆಲ್ ನಿರ್ಮಾಣ ಮಾಡಿ ಒಳಚರಂಡಿ ಕಾಮಗಾರಿ ಕೈಗೊಳ್ಳಬೇಕು. ಮ್ಯಾನ್‌ಹೋಲ್ ನಿರ್ಮಾಣದಲ್ಲೂ ಆಧುನಿಕ ತಂತ್ರಜ್ಞಾನ ಅಳವಡಿಸಬೇಕು ಎಂಬ ಉದ್ದೇಶದಿಂದ 10ಲಕ್ಷ ರೂ.ವೆಚ್ಚದಲ್ಲಿ ಡಿಪಿಆರ್ ನಿರ್ಮಿಸಿ ಅಂದಾಜು ವೆಚ್ಚದ ಪಟ್ಟಿಯನ್ನು ನಗರಾಭಿವೃದ್ಧಿ ಸಚಿವರಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಬಹುದಿನಗಳಿಂದ ಸಮಸ್ಯೆಯಾಗಿಯೇ ಉಳಿದಿರುವ ಪಟ್ಟಣದ ಒಳಚರಂಡಿ ಕಾಮಗಾರಿಗೆ ಮುಕ್ತಿ ದೊರೆಯುವ ಕಾಲ ಸನ್ನಿಹಿತವಾಗಿದೆ. ಒಳಚರಂಡಿ ಕಾಮಗಾರಿಗೆ 127 ಕೋಟಿ ರೂ. ಒಳಚರಂಡಿ ಮಂಡಳಿಯಿಂದ ಅನುಮೋದನೆ ದೊರೆತಿದ್ದು, ಕ್ಯಾಬಿನೆಟ್‌ನಲ್ಲಿ ಅನುಮೋದನೆ ದೊರೆಯಬೇಕಾಗಿದೆ ಎಂದರು.
ಚನ್ನರಾಯಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ನದಿಯ ಮೂಲದಿಂದಲೇ ಕುಡಿಯುವ ನೀರು ಸರಬರಾಜು ಮಾಡುವ 25 ಲಕ್ಷ ರೂ. ಯೋಜನೆಯನ್ನು ಉದ್ಘಾಟಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಸಿ.ಎನ್.ಮೋಹನ್, ಉಪಾಧ್ಯಕ್ಷರಾದ ರಾಣಿಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಆರ್.ಸುರೇಶ್ ಮಾಜಿ ಅಧ್ಯಕ್ಷರುಗಳಾದ ಬನಶಂಕರಿ ರಘು, ಜಿ.ಆರ್.ಸುರೇಶ್, ನವೀನ್ ಕುಮಾರ್, ರಾಧಾಮಂಜುನಾಥ್, ಸದಸ್ಯ ರಾಮು, ಗಣೇಶ್, ಕವಿತಾ ರಾಜು, ಧರಣೇಶ್ ಮುಖಂಡ ಜಿ.ಎಂ.ಕಿರಣ್, ಶಿವು, ಜಯರಾಮ್, ಎಲೆ ಕೃಷ್ಣಪ್ಪ, ದಿನೇಶ್, ಲಕ್ಷ್ಮೀನಾರಾಯಣ್ ಇತರರು ಇದ್ದರು.