ಬೆಂಗಳೂರು: 11 ಗಂಟೆ ನಂತರ ಬಿಎಂಟಿಸಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರ ಬಳಿ ಹೆಚ್ಚುವರಿ ಟಿಕೆಟ್ ದರ ವಸೂಲಿ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಶಕ್ತಿ ಯೋಜನೆಯಡಿ ಸರ್ಕಾರ ನಾಲ್ಕು ನಿಗಮದ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದೆ. ಇದರಿಂದ ಮಹಿಳೆಯರು ಖುಷಿಯಾಗಿ ಸರ್ಕಾರಿ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಆದರೆ ರಾತ್ರಿ 11 ಗಂಟೆಯ ನಂತರ ಪ್ರಯಾಣಿಸುವ ಪುರುಷ ಮತ್ತು ಇತರೆ ಪ್ರಯಾಣಿಕರಿಂದ ಒಂದೂವರೆ ಪಟ್ಟು ಅಧಿಕ ಟಿಕೆಟ್ ದರ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹೆಚ್ಚುವರಿ ಶುಲ್ಕವನ್ನು ಏಕೆ ಪಡೆಯುತ್ತಿದ್ದೀರಾ? ಎಂದು ಪ್ರಯಾಣಿಕರು ನಿರ್ವಾಹಕರನ್ನು ಪ್ರಶ್ನೆ ಮಾಡಿದರೆ ನೈಟ್ ಸರ್ವಿಸ್‌ಗಾಗಿ ಹೆಚ್ಚುವರಿ ಹಣ ಪಡೆದು ಟಿಕೆಟ್ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಸಬೂಬು ನೀಡುತ್ತಿದ್ದಾರೆ. ರಾತ್ರಿ 12 ಗಂಟೆಯ ನಂತರ ಪ್ರಯಾಣಿಸುವ ಪ್ರಯಾಣಿಕರ ಬಳಿ ಹೆಚ್ಚುವರಿ ಹಣವನ್ನು ಪಡೆಯುವುದರಲ್ಲಿ ಒಂದು ಅರ್ಥವಿದೆ. ಆದರೆ 11 ಗಂಟೆ ಆಗುತ್ತಿದಂತೆ ಪ್ರಯಾಣಿಕರಿಂದ ಹೆಚ್ಚುವರಿ ಹಣ ಪಡೆಯುವುದು ಎಷ್ಟು ಸರಿ. ಆಟೋದವರು ೧೦ ಗಂಟೆಯಾಗುತ್ತಿದಂತೆ ದುಪ್ಪಟು ಹಣ ವಸೂಲಿ ಮಾಡುವಂತೆ ಬಿಎಂಟಿಸಿಯವರು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.