ಬೆಂಗಳೂರು: ನಮ್ಮ ಮೆಟ್ರೊ ನೇರಳೆ ಮಾರ್ಗದ ವಿಸ್ತರಿತ ನಿಲ್ದಾಣಗಳ ನಡುವಿನ ಪರೀಾರ್ಥ ಮೆಟ್ರೋ ರೈಲು ಓಡಾಟ ಅಂತಿಮ ಹಂತ ತಲುಪಿದ್ದು, ಸಧ್ಯದಲ್ಲೇ ಮೆಟ್ರೊ ರೈಲು ಸುರತಾ ಆಯುಕ್ತರು (ಸಿಎಂಆರ್ಎಸ್) ಬಂದು ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಬೈಯಪ್ಪನಹಳ್ಳಿ&ಕೆ.ಆರ್.ಪುರ ಹಾಗೂ ಕೆಂಗೇರಿ&ಚಲ್ಲಟ್ಟ ಮಾರ್ಗ ವಾಣಿಜ್ಯ ಸಂಚಾರಕ್ಕೆ ತೆರೆದುಕೊಳ್ಳಲಿದೆ.
ಬೈಯಪ್ಪನಹಳ್ಳಿ&ಕೆ.ಆರ್.ಪುರ ಹಾಗೂ ಕೆಂಗೇರಿ&ಚಲ್ಲಟ್ಟ ಮಾರ್ಗದಲ್ಲಿ ಕಳೆದ ಒಂದು ವಾರದಿಂದ ಮರಳಿನ ಚೀಲ ಹೊತ್ತ ಎರಡು ಮೆಟ್ರೋ ರೈಲುಗಳು ನಿರಂತರವಾಗಿ ಪರೀಾರ್ಥ ಸಂಚಾರ ನಡೆಸುತ್ತಿವೆ. ಪ್ರಯಾಣಿಕರಿರುವ ರೈಲು ಬಂದಾಗ ತಡೆದುಕೊಳ್ಳುವ ಸಾಮರ್ಥ್ಯ ಇದೆಯೇ ಎಂಬುದನ್ನು ಪರೀಸಲು 30 ಕೆ.ಜಿ. ತೂಕದ 2,827 ಮರಳು ಚೀಲಗಳನ್ನು ಬೋಗಿಗಳಿಗೆ ತುಂಬಿಸಿ ಸಾಮರ್ಥ್ಯ ಪರೀಸಲಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸೇವೆ ಜನಪ್ರಿಯತೆ ಪಡೆದುಕೊಂಡಿದ್ದು, ಇನ್ನಷ್ಟು ಪ್ರದೇಶಗಳಿಗೆ ವಿಸ್ತರಣೆಯಾಗಲಿದೆ. ಈ ನಿಟ್ಟಿನಲ್ಲಿ ಹಾಲಿ ಕಾರ್ಯಾಚರಣೆಯಲ್ಲಿರುವ ನೇರಳೆ ಹಾಗೂ ಹಸಿರು ಮಾರ್ಗಕ್ಕೆ ಹೊಸದಾಗಿ ಹಳದಿ ಮಾರ್ಗ ವರ್ಷಾಂತ್ಯಕ್ಕೆ ಸೇರ್ಪಡೆಯಾಗಲಿದೆ. ಬಿಎಂಆರ್ಸಿಎಲ್ನ ಈ ಉಪಕ್ರಮದಿಂದಾಗಿ ಮೆಟ್ರೋ ಪ್ರಯಾಣಿಕರಿಗೆ ಇನ್ನಷ್ಟು ಸ್ಥಳಗಳಿಗೆ ತೆರಳಲು ಅವಕಾಶ ಸಿಗಲಿದೆ. ಮುಖ್ಯವಾಗಿ ಸಂಚಾರ ದಟ್ಟಣೆಯಲ್ಲಿ ಸಿಲುಕದೆ ಕಡಿಮೆ ಅವಧಿಯಲ್ಲಿ ಗಮ್ಯ ತಲುಪುವುದರಿಂದ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚುವ ಸಾಧ್ಯತೆ ಇದೆ. ಇದನ್ನು ಗಮನಿಸಿಯೇ ಸರ್ಕಾರ ನಮ್ಮ ಮೆಟ್ರೋಗೆ ಆದ್ಯತೆ ನೀಡಿದೆ.
ಹೊಸ ಹಳದಿ ಮಾರ್ಗ ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗೆ 19.1 ಕಿ.ಮೀ. ಉದ್ದದ ಮೆಟ್ರೋ ರೈಲು ಸೇವೆ ಡಿಸೆಂಬರ್ಗೆ ಲಭ್ಯವಾಗಲಿದ್ದು, ಸಿದ್ಧತಾ ಕೆಲಸಗಳು ವೇಗ ಪಡೆದುಕೊಂಡಿವೆ. ಈಗಾಗಲೇ ಸಿವಿಲ್ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದೆ. ಸಿಗ್ನಲಿಂಗ್ ಕೆಲಸಗಳು ಮುಗಿಯುತ್ತಿದ್ದಂತೆ, ದೆಹಲಿಯಿಂದ ಮೆಟ್ರೋ ರೈಲ್ವೇ ಸುರಕ್ಷತಾ ಆಯೋಗದ ಪ್ರಮುಖರು ಆಗಮಿಸಿ ನಿಲ್ದಾಣದಲ್ಲಿ ಸುರಕ್ಷತೆ, ಸಿಗ್ನಲಿಂಗ್, ಟ್ರ್ಯಾಕ್ ಮುಂತಾದ ವ್ಯವಸ್ಥೆಗಳ ಕುರಿತು ತಪಾಸಣೆ ನಡೆಸಲಿದ್ದಾರೆ. ಮುಂದಿನ ಅಕ್ಟೋಬರ್-ನವೆಂಬರ್ನಲ್ಲಿ ಪ್ರಾಯೋಗಿಕ ಸಂಚಾರ ನಡೆಸಲು ಬಿಎಂಆರ್ಸಿಎಲ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಪ್ರಮಾಣಪತ್ರ ದೊರೆತೊಡನೆ ಅಧಿಕೃತವಾಗಿ ಸಂಚಾರವನ್ನು ಆರಂಭಿಸಲಾಗುತ್ತದೆ.