ಆರ್ಟ್ ಆಫ್ ಲಿವಿಂಗ್‌ನಿಂದ ರೈತ ಸಂಕಲ್ಪ ಸಮಾವೇಶ
ಹೊಸಪೇಟೆ: ಸಾವಯವ ಕೃಷಿ ಅಳವಡಿಸಿಕೊಂಡು ವಿಷಮುಕ್ತ ಆಹಾರ, ರೋಗಮುಕ್ತ ಸಮಾಜ ನಿರ್ಮಾಣಕ್ಕೆ ರೈತರು ಮುಂದಾಗಬೇಕು ಎಂದು ಸಿರಗುಪ್ಪದ ಸಾವಯವ ಕೃಷಿಕ ಬಿ.ಎಂ.ವೀರಪ್ಪಯ್ಯ ಹೇಳಿದರು.
ಆರ್ಟ್ ಆಫ್ ಲಿವಿಂಗ್‌ನಿಂದ ಆಯೋಜಿಸಿದ್ದ ಮಹಾಸತ್ಸಂಗದ ಕಾರ್ಯಕ್ರಮದ ನಿಮಿತ್ತ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ‘ತುಂಗಭದ್ರಾ ರೈತರ ಸಂಕಲ್ಪ ಸಮಾವೇಶ’ದಲ್ಲಿ ವಿಷಯ ಮಂಡಿಸಿ ಮಾತನಾಡಿದರು. ದಶಕಗಳ ಹಿಂದೆ ಅಪರೂಪವಾಗಿದ್ದ ಕ್ಯಾನ್ಸರ್, ಸಕ್ಕರೆ ಕಾಯಿಲೆ, ರಕ್ತದೊತ್ತಡದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿದೆ. ಪ್ರತಿ ಗ್ರಾಮದಲ್ಲಿ ಕನಿಷ್ಠ ಒಬ್ಬರು ಕ್ಯಾನ್ಸರ್ ಹಾಗೂ ಪ್ರತಿ ಓಣಿಯಲ್ಲೂ ಕನಿಷ್ಠ ಒಬ್ಬರಿಗೆ ಷುಗರ್ ಎನ್ನುಷ್ಟರ ಮಟ್ಟಿಗೆ ಆರೋಗ್ಯದ ಸ್ಥಿತಿ ಹದಗೆಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಸಾಯನಿಕಯುಕ್ತ ಕೃಷಿ ಪದ್ಧತಿಯಿಂದ ಮಾನವನಿಗೆ ಮಾತ್ರವಲ್ಲದೆ ಕೃಷಿ ಭೂಮಿಯ ಗುಣವೂ ಹಾಳಾಗುತ್ತದೆ. ಹೆಚ್ಚಿನ ಇಳುವರಿ ಆಸೆಯಿಂದ ಈ ಭಾಗದ ಭತ್ತ ಬೆಳೆಗಾರರು ಯತೇಚ್ಛವಾಗಿ ರಸಗೊಬ್ಬರ, ಕೀಟನಾಶಕ ಬಳಸುವುದರಿಂದ ಭೂಮಿಯ ಸತ್ವ ಕುಸಿಯುತ್ತಿದೆ. ಕೃಷಿ ವೆಚ್ಚಗಳೂ ಹೆಚ್ಚುತ್ತಿದೆ. ನಾನು 20 ವರ್ಷಗಳಿಂದ ಯಾವುದೇ ರೀತಿಯ ರಸಗೊಬ್ಬರ ಮತ್ತು ಕ್ರಿಮಿನಾಶಕ ಬಳಕೆ ಮಾಡಿಲ್ಲ. ಸಾವಯವ ಗೊಬ್ಬರ ಮತ್ತು ಕೀಟನಾಶಕ್ಕಾಗಿ ಜೀವಾಮೃತ ತಯಾರಿಕೆಯಲ್ಲಿ ಸ್ವಾವಲಂಬನೆ ಕಂಡುಕೊಂಡಿದ್ದೇನೆ. ಎಕರೆಗೆ 38 ಕ್ವಿಂಟಾಲ್ ಅಕ್ಕಿ ಫಸಲು ಬಂದಿದೆ. ಸಾವಯವ ಬೆಳೆ ಖರೀದಿಸಲು ಗ್ರಾಹಕರೇ ಹುಡುಕಿಕೊಂಡು ಬರುತ್ತಿದ್ದಾರೆ ಮತ್ತು ಹೆಚ್ಚಿನ ಬೆಲೆಗೆ ಖರೀದಿಸುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಕೊಪ್ಪಳ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ರುದ್ರೇಶಪ್ಪ ಮಾತನಾಡಿ, ಸಾವಯವ ಎಂಬುದು ಭಾರತೀಯರಿಗೆ ಹೊಸದಲ್ಲ. ಅದು ನಮ್ಮ ರಕ್ತದ ಪ್ರತಿ ಕಣದಲ್ಲಿದೆ. ಕೇಂದ್ರ-ರಾಜ್ಯ ಸರ್ಕಾರ ಸಾವಯವ ಮತ್ತು ಸಿರಿಧಾನ್ಯಗಳಿಗೆ ಒತ್ತು ನೀಡುತ್ತಿದೆ. ಅದಕ್ಕೆ ಪೂರಕವಾಗಿ ವಿವಿಧ ಯೊಜನೆಗಳಿವೆ. ಇಲಾಖೆ ನೆರವು ಪಡೆಯಬಹುದು ಎಂದು ಸಲಹೆ ನೀಡಿದರು.
ಕೃಷಿ ಇಲಾಖೆಯ ರುದ್ರೇಶಪ್ಪ, ಪ್ರಮೋದ ಕಟ್ಟಿ, ವಿಶ್ರಾಂತ ಕುಲಪತಿ ಡಾ. ವಿ.ಐ. ಬೆಣಗಿ, ನಿವೃತ್ತ ಪ್ರಾಧ್ಯಾಪಕ ಎಂ.ಬಿ. ಪಾಟೀಲ್ ಮಾತನಾಡಿ, ಸಾವಯವ ಕೃಷಿಯಿಂದ ಮಣ್ಣಿನ ಸವಕಳಿ ತಡೆಗಟ್ಟಬಹುದು. ಸಾವಯವ ಕೃಷಿಯತ್ತ ರೈತರು ಈಗ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಸಾವಯವ ಕೃಷಿಕರಿಗೆ ಮಾರುಕಟ್ಟೆ ಒದಗಿಸುವುದೂ ಸವಾಲಾಗಿದೆ. ಆದರೆ, ಸಾವಯವ ಉತ್ಪನ್ನದ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಿದಂತೆ ಮಾರುಕಟ್ಟೆ ವಿಸ್ತಾರವಾಗಲಿದೆ ಎಂದರು.
ಬಹಳಷ್ಟು ಕೃಷಿ ತಜ್ಞರು ಮಾತನಾಡಿ, ಸಾವಯವ ಕೃಷಿಗೆ ಉತ್ತಮ ಮಾರುಕಟ್ಟೆ ಇದೆ. ಬೆಳೆಗಳು ಸಾವಯವ ಎಂದು ಕೃಷಿ ಇಲಾಖೆಯಿಂದ ಪ್ರಮಾಣ ಪತ್ರ ಪಡೆಯಬೇಕು. ಜಮೀನುಗಳಲ್ಲಿ ಬೆಳೆಗಳನ್ನು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಿದರೆ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ವಿವರಿಸಿದರು. ಕಾರ್ಯಾಗಾರ ಮತ್ತು ಸಂವಾದದಲ್ಲಿ ಸಿಂಧನೂರು, ಸಿರಗುಪ್ಪ, ಹೊಸಪೇಟೆ, ಗಂಗಾವತಿ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಅನ್ನದಾತರು ಕಣ್ಣೀರು ಹಾಕಿದರೆ ದೇಶಕ್ಕೆ ಮಾರಕ
ರಾಸಾಯನಿಕಮುಕ್ತ ಭತ್ತ ಬೆಳೆಯಲು ತುಂಗಭದ್ರಾ ನದಿ ಪಾತ್ರದ ರೈತರು ನಿರ್ಣಯಿಸುವ ಮೂಲಕ ಮಹತ್ವದ ಪರಿವರ್ತನೆಗೆ ನಾಂದಿ ಹಾಡಿದ್ದಾರೆ ಎಂದು ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ಗುರುದೇವ ಶ್ರೀಶ್ರೀ ರವಿಶಂಕರ ಗುರೂಜಿ ಹೇಳಿದರು.
ರೈತರ ಸಂಕಲ್ಪ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ಮಾತನಾಡಿದ ಅವರು, ಯಾವುದೇ ಬದಲಾವಣೆ ಏಕಾಏಕಿ ನಿರೀಕ್ಷಿಸಲಾಗದು. ಹಂತಹಂತವಾಗಿ ಬದಲಾವಣೆಯನ್ನು ನಿಶ್ಚಿತವಾಗಿ ಕಾಣಬಹುದು. ನೈಸರ್ಗಿಕ ಕೃಷಿಯಿಂದ ಯಾವುದೇ ಅಡ್ಡಪರಿಣಾಮವಿಲ್ಲ. ರೈತರು ಖುಷಿಯಾಗಿದ್ದರೆ ಮಾತ್ರ ದೇಶದ ಉಜ್ವಲ ಸಾಧ್ಯ. ಆದರೆ, ಅನ್ನದಾತರು ಕಣ್ಣೀರು ಹಾಕಿದರೆ ದೇಶಕ್ಕೆ ಮಾರಕ. ಆರ್ಟ್ ಆಫ್ ಲಿವಿಂಗ್‌ನ ಬೆಂಗಳೂರು ಆಶ್ರಮದಲ್ಲಿ ಭತ್ತ ಬಿತ್ತನೆ ಬೀಜ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಶಿವರಾತ್ರಿಗೆ ಲೋಕಾರ್ಪಣೆ ಮಾಡಲಾಗುವುದು. ಕೇಂದ್ರದಲ್ಲಿ ನೈಸರ್ಗಿಕ ಬೀಜೋತ್ಪಾದನೆ ಕುರಿತು ಮಾಹಿತಿ ಹಂಚಿಕೆ ಜತೆಗೆ ಸೂಕ್ತ ದರದಲ್ಲಿ ಮಾರಾಟ ಮಾಡಲಾಗುವುದು ಎಂದರು. ಇದಕ್ಕೂ ಮುನ್ನ ಸಾವಯವ ಕೃಷಿಕ ಶೇಷಗಿರಿ ಗುಬ್ಬಿ ಅವರು ರೈತರಿಗೆ ಸಾವಯವ ಕೃಷಿ ಸಂಕಲ್ಪ ನೆರವೇರಿಸಿದರು.