ಬೆಳಗಾವಿ: ಲಾಕ್‌ಡೌನ್ ಘೋಷಣೆ ಮಾಡಿರುವ ಸಂದರ್ಭದಲ್ಲಿ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುತ್ತಿರುವ ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಅಬಕಾರಿ ಇಲಾಖೆ ಪೊಲೀಸರು ಮೂವರನ್ನು ಬಂಧಿಸಿ ಅವರಿಂದ 45 ಸಾವಿರ ರೂ. ಮೌಲ್ಯದ ಕಳ್ಳಬಟ್ಟಿ ಜಪ್ತಿ ಮಾಡಿಕೊಂಡಿದ್ದಾರೆ.
ಬೈಲಹೊಂಗಲ ತಾಲೂಕಿನ ಕಲ್ಮೇಶ ಶಿವರಾಯಪ್ಪ ಕಳ್ಳಿ (36), ಈರಪ್ಪ ಬಸಪ್ಪ ಕಡಕೋಳ (33), ವಿಜಯ ಸಿದ್ದಪ್ಪ ಹೊಸವಾಳ (28) ಬಂಧಿತರು.
ಬೈಲಹೊಂಗಲ ತಾಲೂಕು ವ್ಯಾಪ್ತಿಯಲ್ಲಿ ಬರುವ ಹಾಗೂ ಈ ಹಿಂದೆ ಇದ್ದ ಕಳ್ಳಬಟ್ಟಿ ಕೇಂದ್ರಗಳ ಅಡ್ಡೆಗಳಾದ ದೇಶನೂರ, ಹೊಗರ್ತಿ, ಕೊಳದೂರ, ಮೊಹರೆ, ಸುತಗಟ್ಟಿ ಹಾಗೂ ವಟಬಾಳ ಹಳ್ಳಿಗಳ ಬಳಿ ಕಳ್ಳಬಟ್ಟಿ ತಯಾರಿಕೆ ಮತ್ತು ಮಾರಾಟ ಮಾಡುತ್ತಿರುವ ಸಂದರ್ಭದಲ್ಲಿ ಸರಣಿ ದಾಳಿ ನಡೆಸಿ 45 ಸಾವಿರ ರೂ.ಮೌಲ್ಯದ 20 ಲೀ. ಕಳ್ಳಬಟ್ಟಿ ಸರಾಯಿ, ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.