ಪಡುಬಿದ್ರಿ: ಫ್ಲೋಟಿಣಗ್ ರೆಸ್ಟೋರೆಂಟನ್ನು ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್‌ನಿಂದಲೇ ಆರಂಭಿಸಲಾಗುವುದು. ಈಗಾಗಲೇ ಬೀಚ್‌ನಲ್ಲಿ 49 ಜನ ಸ್ಥಳೀಯರಿಗೆ ನೀಡಿರುವ ಉದ್ಯೋಗಾವಕಾಶ ನೀಡಲಾಗಿದ್ದು, ಇನ್ನೆರಡು ವರ್ಷದಲ್ಲಿ 100ಕ್ಕೇರಿಸಲು ಅಗತ್ಯವಿರುವ ಚಟುವಟಿಕೆೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್‌ನಲ್ಲಿ ಆರಂಭಿಸಿರುವ ಫುಡ್ ಕೋರ್ಟ್ ಹಾಗೂ ಕಯಾಕಿಂಗ್ ಬೋಟಿಂಗ್ ವ್ಯವಸ್ಥೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಬೀಚ್‌ನಲ್ಲಿ ನಿರ್ವಹಣೆಯಲ್ಲಿದ್ದ ಸಿಬ್ಬಂದಿಗೆ ಉದ್ಯೋಗ ಹಾಗೂ ವೇತನ ನೀಡುವ ಸಲುವಾಗಿ ಇಲ್ಲಿಯೇ ದುಡಿಮೆ ಕಲ್ಪಿಸಲು ಹಲವಾರು ಚಟುವಟಿಕೆಗಳನ್ನು ಆರಂಭಿಸಲಾಗುತ್ತಿದೆ. ಈಗಾಗಲೇ 3 ಕಯಾಕಿಂಗ್ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಕಯಾಕಿಂಗ್‌ಗಳನ್ನು ಜೋಡಿಸಿ ಸ್ಪರ್ಧೆ ಹಾಗೂ ಚಟುವಟಿಕೆಗಳನ್ನು ಮಾಡಲಾಗುವುದು. ಈವರೆಗೆ ಸುಮಾರು 5 ಜೋಡಿ ವಿದೇಶಿ ಪ್ರವಾಸಿಗರು ಬೀಚ್‌ಗೆ ಭೇಟಿ ನೀಡಿದ್ದು, ಒಳ್ಳೆಯ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ ಎಂದರು.
ಹಳೇ ಬೀಚ್‌ನಲ್ಲಿ ಸೂಕ್ತ ಮೂಲ ವ್ಯವಸ್ಥೆಯನ್ನು ಕಲ್ಪಿಸಿ ಸ್ಥಳೀಯರಿಗೆ ನಿರ್ವಹಣೆಗೆ ವಹಿಸಿ, ಹಳೇ ಶೌಚಗೃಹವನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕು ಎಂದರು. ಶೌಚಗೃಹ ನಿರ್ಮಾಣ ಯೋಜನೆ ಕುಂಠಿತವಾಗಿರುವ ಬಗ್ಗೆ ಗರಂ ಆದ ಜಿಲ್ಲಾಧಿಕಾರಿ ಜಗದೀಶ್, ಸಣ್ಣ ಶೌಚಗೃಹ ಕಟ್ಟಲು ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ? ಅದೇನು ವಿಧಾಸೌಧ ಕಟ್ಟುತ್ತಿದ್ದಾರೆಯೇ? ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಪಡುಬಿದ್ರಿ ಬಸ್ ನಿಲ್ದಾಣ ನಿರ್ಮಾಣ ಮತ್ತು ಕಾರ್ಕಳ ರಸ್ತೆಯಲ್ಲಿನ ಪಾರ್ಕಿಂಗ್ ಸಮಸ್ಯೆಗಳ ಬಗ್ಗೆ ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಖುದ್ದು ಭೇಟಿ ನೀಡಿ, ಸುಧಾರಣೆಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಪಡುಬಿದ್ರಿ ಘನತ್ಯಾಜ್ಯ ಘಟಕ ನಿರ್ಮಾಣ ಕುರಿತಂತೆ ಇರುವ ಗೊಂದಲ ಪರಿಹರಿಸಲು ಶಾಸಕರೊಂದಿಗೆ ಸ್ಥಳ ಪರಿಶೀಲನೆ ನಡೆಸಿ,ತೀರ್ಮಾನಕ್ಕೆ ಬರಲಾಗುವುದು ಎಂದರು.
ಜಿಪಂ ಸದಸ್ಯ ಶಶಿಕಾಂತ ಪಡುಬಿದ್ರಿ, ತಾಪಂ ಸದಸ್ಯೆ ನೀತಾ ಗುರುರಾಜ್, ಗ್ರಾಪಂ ಅಧ್ಯಕ್ಷ ರವಿ ಶೆಟ್ಟಿ, ಉಪಾಧ್ಯಕ್ಷೆ ಯಶೋಧಾ, ಸದಸ್ಯರಾದ ಸುಜಾತಾ ಆಚಾರ್ಯ, ವಿದ್ಯಾಶ್ರೆ, ಗಣೇಶ್ ಕೋಟ್ಯಾನ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್, ಪಡುಬಿದ್ರಿ ಬೀಚ್ ನೋಡೆಲ್ ಅಧಿಕಾರಿ ಡಾ.ಚಂದ್ರಶೇಖರ ನಾಯಕ್, ಅಸೋಸಿಯೇಶನ್ ಆಫ್ ಕೋಸ್ಟಲ್ ಟೂರಿಸಂ ಅಧ್ಯಕ್ಷ ಮನೋಹರ ಶೆಟ್ಟಿ, ಗೌರವ್ ಶೇಣವ, ಬ್ಲೂಫ್ಲ್ಯಾಗ್ ಬೀಚ್ ವ್ಯವಸ್ಥಾಪಕ ವಿಜಯ ಶೆಟ್ಟಿ, ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಗಣೇಶ್, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಹರೀಶ್ ಮೊದಲಾದವರು ಉಪಸ್ಥಿತರಿದ್ದರು.
ಟೋಲ್ ಬಗ್ಗೆ ಸಭೆ ನಡೆಸಿ ತೀರ್ಮಾನ
ಟೋಲ್ ವಿಚಾರದಲ್ಲಿ ಜಿಲ್ಲಾಡಳಿತ ಪಾತ್ರ ತುಂಬಾ ಕಡಿಮೆ. ಸಂಸದರು ಟೋಲ್ ಗುತ್ತಿಗೆದಾರರನ್ನು ಕರೆಸಿ ಸಭೆ ನಡೆಸಿ ಸಾಸ್ತಾನದಲ್ಲಿ ಸ್ಥಳೀಯ 5 ಕಿ.ಮೀ. ವ್ಯಾಪ್ತಿಯವರೆಗೆ ಟೋಲ್ ವಿನಾಯಿತಿ ನೀಡಲು ಕ್ರಮ ವಹಿಸಿದ್ದಾರೆ. ಪಡುಬಿದ್ರಿ ಜಿಪಂ ವ್ಯಾಪ್ತಿಯವರಿಗೂ ವಿನಾಯಿತಿ ನೀಡುವಂತೆ ಹೋರಾಟ ಸಮಿತಿಯವರು ಬೇಡಿಕೆ ಸಲ್ಲಿಸಿದ್ದಾರೆ. ಸಂಸದರು ಅಧಿವೇಶನದ ಬಳಿಕ ಜಿಲ್ಲೆಗೆ ಆಗಮಿಸಲಿದ್ದು, ಸಭೆ ನಡೆಸಿ ತೀರ್ಮಾನಿಸಲಾಗುವುದು.
ಸರ್ಕಾರಕ್ಕೆ 6 ಕೋಟಿ ರೂ. ಅನುದಾನಕ್ಕೆ ಬೇಡಿಕೆ ನೀಡಲಾಗಿದ್ದು, ಅದು ಮಂಜೂರಾತಿ ಹಂತದಲ್ಲಿದೆ. ಆ ಅನುದಾನ ಬಳಸಿ ಇಲ್ಲಿನ ಸಂಪರ್ಕ ರಸ್ತೆ, ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. 50 ಲಕ್ಷ ರೂ. ವೆಚ್ಚದಲ್ಲಿ ನದಿ ತಡೆಗೋಡೆ ಕಾಮಗಾರಿ ಶೀಘ್ರದಲ್ಲಿ ಆರಂಭಿಸಲಾಗುವುದು. ಹಳೇ ಬೀಚನ್ನು ಸ್ಥಳೀಯರಿಗೆ ನಿರ್ವಹಣೆಗೆ ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ.
ಜಿ.ಜಗದೀಶ್, ಉಡುಪಿ ಜಿಲ್ಲಾಧಿಕಾರಿ