ಜಿಲ್ಲೆ

ದಿಢೀರ್ ಹಸಿರು ಬಣ್ಣಕ್ಕೆ ತಿರುಗಿದ ಕಡಲು

Udupi

ಕುಂದಾಪುರ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಮುದ್ರದ ನೀರು ರಾತ್ರಿ ಹೊತ್ತಿಗೆ ನೀಲಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ನಡುವೆಯೇ, ಗಂಗೊಳ್ಳಿಯಿಂದ ಶಿರೂರು ತನಕ ಕಡಲತೀರದಲ್ಲಿ ರಾಶಿ ರಾಶಿ ಪಾಚಿ ಬಂದು ಬೀಳುತ್ತಿರುವುದು ಆತಂಕಕ್ಕೀಡು ಮಾಡಿದೆ.

ನೋಕ್ಟಿಲೂಕಾ ಸಿಂಟಿಲನ್ಸ್(Noctiluca scintillans) ಅಥವಾ ಸೀ ಸ್ಪಾರ್ಕಲ್ ಎಂದು ಕರೆಯಲಾಗುವ ಸೂಕ್ಷ್ಮಾಣು ಜೀವಿಯಿಂದಾಗಿ ಸಮುದ್ರ ನೀರಿನಲ್ಲಿ ಜೈವದೀಪ್ತಿ ಅಥವಾ ಬಯೋಲ್ಯುಮಿನಿಸೆನ್ಸ್ ಎಂಬ ಈ ಪ್ರಕ್ರಿಯೆ ನಡೆಯುತ್ತಿದೆ. ಸೂಕ್ಷ್ಮಾಣು ಜೀವಿಗಳು ಅಥವಾ ಪಾಚಿ ಮಾದರಿಯ ಪ್ಲಾಂಕ್ಟನ್ ಜೀವಿಗಳಲ್ಲಿ ಉಂಟಾಗುವ ಜೈವಿಕ ರಾಸಾಯನಿಕ ಕ್ರಿಯೆಯಿಂದಾಗಿ ನೀಲಿ ಬೆಳಕು ಅಥವಾ ಜೈವಿಕ ವಸ್ತುಗಳಿರುವ ಮರಳಿನಲ್ಲಿ ಈ ಜೈವದೀಪ್ತಿ ಕಾಣಿಸುತ್ತದೆ.

ಸಮುದ್ರ ತೀರದಲ್ಲಿ ರಾತ್ರಿ ಪಾಚಿ ಮಂದಬೆಳಕಿನ ಪ್ರತಿಫಲನಕ್ಕೆ ಬೆಳಕು ಚೆಲ್ಲಿದಂತೆ ಕಂಡರೆ ಸೂರ್ಯನ ರಶ್ಮಿ ಬಿದ್ದಾಗ ಅದು ಹಸಿರು ಬಣ್ಣಕ್ಕೆ ತಿರುಗುತ್ತದೆ. ಮೂರ‌್ನಾಲ್ಕು ದಿನದಿಂದ ಗಂಗೊಳ್ಳಿ, ಕೋಡಿ, ಪಡುವರಿ, ಶಿರೂರು ಕಡಲ ಕಿನಾರೆ ಪಾಚಿಯಿಂದ ಬಣ್ಣ ಬದಲಾಯಿಸಿದೆ. ಇದಕ್ಕೆ ಸಮುದ್ರ ಮಾಲಿನ್ಯವೇ ಕಾರಣ ಎನ್ನುತ್ತಾರೆ ತಜ್ಞರು.

ಸಮುದ್ರದಲ್ಲಿ ನೀಲಿ ಬೆಳಕು, ಪಾಚಿ ಕಂಡುಬರಲು ಪರಿಸರ ಮಾಲಿನ್ಯ, ಕೊಳಕು ನೀರು ಸಮುದ್ರ ಸೇರುತ್ತಿರುವುದು, ಜಾಗತಿಕ ತಾಪಮಾನ ಏರಿಕೆ ಕಾರಣ. ಸಮುದ್ರ ಮಾಲಿನ್ಯ ತಡೆಯುವುದೇ ಇದಕ್ಕೆ ಪರಿಹಾರ ಎಂದು ಮಂಗಳೂರು ಮೀನುಗಾರಿಕಾ ಕಾಲೇಜಿನ ಡೀನ್ ಡಾ.ಸೆಂಥಿಲ್‌ವೇಲು ಅಭಿಪ್ರಾಯಪಟ್ಟಿದ್ದಾರೆ.

ಸಮುದ್ರದಲ್ಲಿನ ಈ ಬದಲಾವಣೆ ಮೀನುಗಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಮುದ್ರ ಪಾಚಿಗಟ್ಟುವುದರಿಂದ ಮೀನು ಸಂತತಿ ಮೇಲೆ ದುಷ್ಪರಿಣಾಮ ಆದರೆ ಮೀನುಗಾರರಿಗೂ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಗಂಗೊಳ್ಳಿಯ ವಿಶ್ವನಾಥ.

ವೀಕ್ಷಣೆಗೆ ಬಂದವರಿಗೆ ನಿರಾಸೆ: ಸುರತ್ಕಲ್-ಮೂಲ್ಕಿ ಭಾಗದಲ್ಲಿ ಕಳೆದೊಂದು ವಾರದಿಂದ ರಾತ್ರಿ ನೀಲಿ ಬಣ್ಣದಲ್ಲಿ ಹೊಳೆಯುತ್ತಿದ್ದ ನೀರನ್ನು ನೋಡಲು ಬೀಚ್‌ಗಳತ್ತ ತಂಡೋಪತಂಡವಾಗಿ ಜನರು ಬರುತ್ತಿದ್ದಾರೆ. ಆದರೆ ಒಂದೆರಡು ದಿನಗಳಿಂದ ಈ ಪ್ರಕ್ರಿಯೆ ಕಾಣುತ್ತಿಲ್ಲ. ಹಾಗಾಗಿ ಬಂದವರು ನಿರಾಸೆಯಿಂದ ವಾಪಸ್ ಹೋಗುತ್ತಿದ್ದಾರೆ.