ಜಿಲ್ಲೆ

ಪ್ರವಾಸೋದ್ಯಮಕ್ಕೆ 2,500 ಕೋಟಿ ರೂ., ಸಂಸದೆ ಶೋಭಾ ಮಾಹಿತಿ

Udupi

ಪಡುಬಿದ್ರಿ: ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗಾಗಿ 2,500 ಕೋಟಿ ರೂ. ವೆಚ್ಚದ ಯೋಜನೆಗಳನ್ನು ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕೇಂದ್ರ ಸರ್ಕಾರದ ಪರಿಸರ ಮಂತ್ರಾಲಯ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಸೊಸೈಟಿ ಆಫ್ ಇಂಟಿಗ್ರೇಟೆಡ್ ಕೋಸ್ಟಲ್ ಮ್ಯಾನೇಜ್‌ಮೆಂಟ್, ಎ ಟು ಜಡ್ ಇನ್‌ಫ್ರಾ ಸರ್ವೀಸ್ ನವದೆಹಲಿ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆದಿರುವ ಪಡುಬಿದ್ರಿ ಎಂಡ್ ಪಾಯಿಂಟ್ ಬ್ಲೂ ಫ್ಲ್ಯಾಗ್ ಕಡಲತೀರದ ಧ್ವಜಾರೋಹಣ ನೆರವೇರಿಸಿ ಸೋಮವಾರ ಮಾತನಾಡಿದರು.

ಕೇಂದ್ರ ಸರ್ಕಾರ ಸಾಗರ್‌ಮಾಲಾ ಯೋಜನೆಯಡಿ ಜಿಲ್ಲೆಯಲ್ಲಿ ಸರ್ಕ್ಯೂಟ್ ಟೂರಿಸಂಗಾಗಿ 1,000 ಕೋಟಿ ರೂ. ಪ್ರಸ್ತಾವನೆ ನೀಡಿದೆ. ಹೆಜಮಾಡಿ ಕೋಡಿ ಬಂದರು ನಿರ್ಮಾಣ ಯೋಜನೆಗಾಗಿ ಕೇಂದ್ರದಿಂದ 100 ಕೋಟಿ ರೂ. ವೆಚ್ಚದ ತೇಲುವ ಜೆಟ್ಟಿ, ಲೈಟ್‌ಹೌಸ್ ಅಭಿವೃದ್ಧಿ ಹಾಗೂ ವಿದ್ಯುದೀಕರಣ ಹಾಗೂ ಪಡುಕರೆ ಮರೀನಾ ಬೀಚ್ ಅಭಿವೃದ್ಧಿಗೆ ನಿರ್ಧರಿಸಲಾಗಿದೆ ಎಂದರು.

ವೀಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹಾಗೂ ಬಾಬುಲ್ ಸುಪ್ರಿಯೋ ಬೀಚ್ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಜಿ.ಜಗದೀಶ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಶಾಸಕ ಲಾಲಾಜಿ ಆರ್. ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಶಾಸಕ ಕೆ.ರಘುಪತಿ ಭಟ್, ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಅಧ್ಯಕ್ಷ ದಿನಕರ ಬಾಬು, ಎಸ್ಪಿ ಎನ್. ವಿಷ್ಣುವರ್ಧನ್ ಮೊದಲಾದವರು ಉಪಸ್ಥಿತರಿದ್ದರು.

ಬಾರ್ಕೂರಿನಲ್ಲಿ ಆಳುಪ ಪಾರಂಪರಿಕ ಕೇಂದ್ರ ನಿರ್ಮಾಣ, ಕಲ್ಯಾಣಪುರ ಮತ್ತು ಮಾಬುಕಳ ಸೇತುವೆ ಬಳಿ ಫೆರ‌್ರಿ ಸರ್ವೀಸ್ ಸೆಂಟರ್ ಹಾಗೂ ಸೀ ಫುಡ್ ಪಾರ್ಕ್ ನಿರ್ಮಾಣಕ್ಕೆ ಕೇಂದ್ರ ತೀರ್ಮಾನಿಸಿದೆ. ಕೌಶಲಾಭಿವೃದ್ಧಿ ಯೋಜಯಡಿ ಮೆರಿಟೈಮ್ ಸೆಕ್ಟರ್ ಹಾಗೂ ಬಂದರು ಅಭಿವೃದ್ಧಿ ಯೋಜನೆ, ಪರಿಸರ ಸಹ್ಯವಾಗಿ ಕೋಡಿ ಕುಂದಾಪುರ ಬೀಚ್ ಅಭಿವೃದ್ಧಿ ಗಂಗೊಳ್ಳಿ ಬೀಚ್, ಜೈನ್ ಸ್ಪಿರಿಚುವಲ್ ಸರ್ಕ್ಯೂಟ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಪ್ರಸ್ತಾವನೆ ಸಿದ್ಧಪಡಿಸಿದೆ.

- ಶೋಭಾ ಕರಂದ್ಲಾಜೆ, ಸಂಸದೆ

ಬ್ಲೂ ಫ್ಲ್ಯಾಗ್ ಬೀಚ್, ಸ್ಥಳೀಯರ ಕಡಗಣನೆಗೆ ಅಸಮಾಧಾನ

ಪಡುಬಿದ್ರಿ: ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ಕಡಲ ತೀರದ ಉದ್ಘಾಟನಾ ಸಮಾರಂಭದ ಕೊನೆಯಲ್ಲಿ ಜಿಲ್ಲಾಡಳಿತದಿಂದ ಸ್ಮರಣಿಕೆ ನೀಡುವ ವೇಳೆ ಯೋಜನೆ ಅನುಷ್ಠಾನಕ್ಕೆ ಸಹಕರಿಸಿದ ಸ್ಥಳೀಯರನ್ನು ಕಡೆಗಣಿಸಿರುವುದಕ್ಕೆ ಗ್ರಾ.ಪಂ ಮಾಜಿ ಸದಸ್ಯ ಅಶೋಕ್ ಸಾಲ್ಯಾನ್ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು. ಪರಿಣಾಮ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಪ್ರಮುಖ ವ್ಯಕ್ತಿಗಳಿಗೆ ಸ್ಮರಣಿಕೆ ನೀಡಲು ಮೊಗವೀರ ಮುಖಂಡ ಸುಕುಮಾರ್ ಶ್ರೀಯಾನ್ ಅವರನ್ನು ಅಧಿಕಾರಿಗಳು ವೇದಿಕೆಗೆ ಆಹ್ವಾನಿಸಿದರು. ಈ ವೇಳೆ ಅಶೋಕ್ ಅವರನ್ನು ವೇದಿಕೆಗೆ ಹೋಗದಂತೆ ತಡೆದು ಈ ಕಾರ್ಯಕ್ರಮದಲ್ಲಿ ಸ್ಥಳೀಯರನ್ನು ಕಡೆಗಣಿಸಲಾಗಿದೆ. ಸ್ಥಳೀಯರು ಈ ಬೀಚ್‌ಗಾಗಿ ಸೇವೆ ಮಾಡಿದ್ದಾರೆ. ಅದನ್ನು ಅಧಿಕಾರಿಗಳು ಮರೆತಿದ್ದಾರೆ. ಅಲ್ಲದೆ ಇಲ್ಲಿಗೆ ಬೇಕಾದ ಮೂಲಸೌಕರ್ಯಗಳನ್ನು ಮಾಡದೆ ಸ್ಥಳೀಯರನ್ನು ಕಡೆಗಣಿಸಿ ಬೀಚ್ ಉದ್ಘಾಟಿಸಿರುವ ಕ್ರಮವನ್ನು ಪ್ರಶ್ನಿಸಿದರು. ಈ ವೇಳೆ ವೇದಿಕೆಯಲ್ಲಿದ್ದ ಜಿಲ್ಲಾಧಿಕಾರಿ ಜಿ.ಜಗದೀಶ್ ತಬ್ಬಿಬ್ಬಾದರು. ಯಾವುದೇ ಕಾರಣಕ್ಕೂ ಸ್ಥಳೀಯರನ್ನು ಕಡೆಗಣಿಸಿಲ್ಲ. ಅಲ್ಲದೆ ಇಲ್ಲಿನ ಸಮಸ್ಯೆಗಳತ್ತ ಗಮನಹರಿಸಲಾಗುವುದು ಎಂದು ಹೇಳುವ ಮೂಲಕ ಸಮಾಧಾನ ಪಡಿಸಿದರು.