ಮಂಗಳೂರು: ಕೇರಳ, ಕರ್ನಾಟಕದಂತಹ ಕರಾವಳಿ (ಬೀಚ್) ನಗರಗಳಿರುವ ರಾಜ್ಯಗಳನ್ನು ಬ್ಲೂ ಇಕಾನಮಿ ಮಾಡುವ ಸಮಗ್ರ ಯೋಜನೆ ಹಾಕಿಕೊಳ್ಳಲಾಗಿದ್ದು, ಇದನ್ನು ಆತ್ಮನಿರ್ಭರ ಭಾರತದ ಭಾಗವಾಗಿಸಲಾಗಿದೆ. ಬಹುವಿಧ ಸಂಪರ್ಕ, ಕರಾವಳಿ ರಸ್ತೆ ನಿರ್ಮಾಣ ಇತ್ಯಾದಿಗೆ ಇದರಲ್ಲಿ ಒತ್ತು ನೀಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಮಂಗಳೂರು-ಕೊಚ್ಚಿನ್ ಮಧ್ಯೆ ಗೈಲ್‌ನವರ 450 ಕಿ.ಮೀ ಉದ್ದದ ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು ಮಂಗಳವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ದೇಶಕ್ಕೆ ಸಮರ್ಪಣೆಗೊಳಿಸಿ ಅವರು ಮಾತನಾಡಿ, ನೀಲಿ ಆರ್ಥಿಕತೆ ಯೋಜನೆಯಲ್ಲಿ ಬಂದರುಗಳು ಮತ್ತು ಕರಾವಳಿ ರಸ್ತೆಗಳನ್ನು ಬಹುವಿಧದಲ್ಲಿ ಸಂಪರ್ಕಿಸಲಾಗುವುದು. ಕರಾವಳಿಯನ್ನು ನೆಮ್ಮದಿಯ ಬದುಕು (ಈಸ್ ಆಫ್ ಲಿವಿಂಗ್) ಮತ್ತು ನೆಮ್ಮದಿಯ ವ್ಯಾಪಾರ (ಈಸ್ ಆಫ್ ಡೂಯಿಂಗ್ ಬಿಸಿನೆಸ್)ಗಳಿಗೆ ಮಾದರಿಯಾಗಿ ಪರಿಗಣಿಸುತ್ತೇವೆ ಎಂದು ಪ್ರಧಾನಿ ನುಡಿದರು.
ಮೀನುಗಾರ ಸಮುದಾಯವು ಸಮುದ್ರದ ಸಂಪತ್ತಿನ ಮೇಲೆ ಅವಲಂಬಿತವಾಗಿರುವುದಷ್ಟೇ ಅಲ್ಲ, ಅದರ ಕಾವಲುಗಾರರೂ ಆಗಿದ್ದಾರೆ. ಅದಕ್ಕಾಗಿ ಕರಾವಳಿ ಪರಿಸರವನ್ನು ಸಂರಕ್ಷಿಸುವುದಕ್ಕೆ ಸರ್ಕಾರ ಬದ್ಧವಾಗಿದೆ. ಆಳಸಮುದ್ರ ಮೀನುಗಾರಿಕೆಗೆ ಸಹಕಾರ ನೀಡುವುದು, ಸುಲಭ ಹಾಗೂ ಅಗ್ಗದ ಸಾಲವನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ನೀಡುವುದಕ್ಕೆ ಮುಂದಾಗಿದ್ದೇವೆ. ಇತ್ತೀಚೆಗೆ ಚಾಲನೆ ನೀಡಲಾಗಿರುವ ಮತ್ಸೃಸಂಪದ ಯೋಜನೆಯೂ ಲಕ್ಷಾಂತರ ಮೀನುಗಾರರಿಗೆ ನೆರವಾಗುತ್ತದೆ ಎಂದರು.
ಮೋದಿ ಕನ್ನಡ ಟ್ವೀಟ್: ಪೈಪ್‌ಲೈನ್ ಉದ್ಘಾಟನೆ ನೆರವೇರಿಸಿದ ಬಳಿಕ ಪ್ರಧಾನಿ ಮೋದಿ ಕನ್ನಡದಲ್ಲೇ ಈ ಕುರಿತು ತಮ್ಮ ಖಾತೆಯಿಂದ ಟ್ವೀಟ್ ಕೂಡ ಮಾಡಿದ್ದಾರೆ. ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಕೊಳವೆ ಮಾರ್ಗ ತಾಂತ್ರಿಕತೆಯ ಅದ್ಭುತ, ಇದೊಂದು ಭವಿಷ್ಯದ ಯೋಜನೆಯಾಗಿದ್ದು, ಭಾರತದ ಅಭಿವೃದ್ಧಿಯ ಚಾಲನಾ ಶಕ್ತಿಯಾಗಿದೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ದ.ಕ, ಉಡುಪಿಯಲ್ಲಿ 1 ಲಕ್ಷ ಗ್ಯಾಸ್ ಸಂಪರ್ಕ: ಸಂಸದ ನಳಿನ್ ಹೇಳಿಕೆ
ನೈಸರ್ಗಿಕ ಅನಿಲ ಪೂರೈಕೆ ಆರಂಭಗೊಂಡಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1 ಲಕ್ಷ ಮನೆಗಳಿಗೆ ಗ್ಯಾಸ್ ಸಂಪರ್ಕ ಗುರಿ ಹಾಕಿಕೊಳ್ಳಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಮಂಗಳೂರಿನ ಎಂಸಿಎಫ್ ಗ್ಯಾಸ್ ರಿಸೀವಿಂಗ್ ಸ್ಟೇಷನ್ ಆವರಣದಲ್ಲಿ ಮಂಗಳವಾರ ಕೊಚ್ಚಿನ್-ಮಂಗಳೂರು ಸಿಎನ್‌ಜಿ ಪೈಪ್‌ಲೈನ್ ಸಮರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೇಂದ್ರ ಸಚಿವರಾಗಿದ್ದ ದಿ.ಅನಂತ ಕುಮಾರ್ ಈ ಅನಿಲ ಸಂಪರ್ಕದ ಪೈಪ್‌ಲೈನ್‌ಗೆ ಇದ್ದ ಅಡೆತಡೆ ನಿವಾರಿಸಿದ್ದರು. ಮಂಗಳೂರು ನಗರದಲ್ಲಿ ಸುಮಾರು 4 ಸಾವಿರ ಮನೆಗಳಿಗೆ ಸಿಟಿ ಗ್ಯಾಸ್ ಸಂಪರ್ಕ ನೀಡುವಂತೆ ಅರ್ಜಿ ಸಲ್ಲಿಕೆಯಾಗಿದೆ. ಮಂಗಳೂರಿನಲ್ಲಿ ಗೈಲ್, ಉಡುಪಿಯಲ್ಲಿ ಅದಾನಿ ಗ್ರೂಪ್ ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ ಎಂದರು.
ಎಂಸಿಎಫ್ ಈಗ ನಾಫ್ತಾ ಬದಲು ಸಿಎನ್‌ಜಿಯಿಂದಲೇ ರಸಗೊಬ್ಬರ ಉತ್ಪಾದಿಸುತ್ತಿದೆ. ಕಡಿಮೆ ವೆಚ್ಚದಲ್ಲಿ ರಸಗೊಬ್ಬರ ಉತ್ಪಾದಿಸುವ ಮೂಲಕ ರೈತರಿಗೂ ಇದರಿಂದ ಪ್ರಯೋಜನವಾಗಲಿದೆ. ಮುಂದೆ ಎಂಆರ್‌ಪಿಎಲ್ ಕೂಡ ಸಿಎನ್‌ಜಿ ಮೂಲಕ ಕಾರ್ಯನಿರ್ವಹಿಸಲಿದೆ ಎಂದರು.
ಶಾಸಕ ಡಾ.ಭರತ್ ಶೆಟ್ಟಿ, ಮೇಯರ್ ದಿವಾಕರ್, ಎಂಆರ್‌ಪಿಎಲ್ ಎಂಡಿ ವೆಂಕಟೇಶ್, ಎಂಸಿಎಫ್ ನಿರ್ದೇಶಕ ಪ್ರಭಾಕರ ರಾವ್, ಗೈಲ್ ನಿರ್ದೇಶಕ ಎಂ.ವಿ.ಐಯ್ಯರ್ ಮತ್ತಿತರರಿದ್ದರು.
ಮಾರ್ಚ್‌ಗೆ ಗುಂಡ್ಯ 4 ಲೇನ್ ಕಾಮಗಾರಿ: ಬಿ.ಸಿ.ರೋಡ್-ಗುಂಡ್ಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಟೆಂಡರ್ ಪೂರ್ತಿಯಾಗಿದ್ದು, ಮಾರ್ಚ್‌ನಿಂದ ಕಾಮಗಾರಿ ಆರಂಭವಾಗಲಿದೆ. ಶಿರಾಡಿ ಘಾಟ್‌ನಲ್ಲಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸುರಂಗ ಹೆದ್ದಾರಿ ನಿರ್ಮಾಣವಾಗಲಿದೆ. ಕುಲಶೇಖರ-ಕಾರ್ಕಳ ಹೆದ್ದಾರಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಮುಂದಿನ 5 ವರ್ಷದಲ್ಲಿ ಮಂಗಳೂರಿನಲ್ಲಿ ಕೈಗಾರಿಕೆಗಳಿಗೆ ಶಿವಮೊಗ್ಗ, ಬೆಂಗಳೂರಿಗೆ ಸುಲಭ ಸಂಚಾರ ಸಾಧ್ಯವಾಗಲಿದೆ ಎಂದು ನಳಿನ್ ತಿಳಿಸಿದರು.
ಮಂಗಳೂರಿನಲ್ಲಿ ದೇಶದ ಮೊದಲ ಕೋಸ್ಟ್‌ಗಾರ್ಡ್ ತರಬೇತಿ ಕೇಂದ್ರಕ್ಕೆ ಇನ್ನು ಎರಡು ತಿಂಗಳಲ್ಲಿ ಶಿಲಾನ್ಯಾಸ ನೆರವೇರಿಸಲಾಗುತ್ತದೆ. ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಸಹಿ ಹಾಕಿದ್ದಾರೆ. ಮಂಗಳೂರಿನಲ್ಲಿ ಬೃಹತ್ ಮೀನುಗಾರಿಕಾ ಜೆಟ್ಟಿ ಕೂಡ ನಿರ್ಮಾಣವಾಗಲಿದೆ ಎಂದರು.