ಬೆಂಗಳೂರು: ಬಿಬಿಎಂಪಿ ಪೌರಕಾರ್ಮಿಕರ ಸಮವಸ್ತ್ರದ ಬಣ್ಣವನ್ನು ಬದಲಾಯಿಸಿದ್ದು, ಈ ಸಾಲಿನಿಂದ ನೀಲಿ ವರ್ಣದ ಯೂನಿಫಾರಂಅನ್ನು ವಿತರಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಹಾಲಿ ಹಸಿರು ಹಾಗೂ ಕೇಸರಿ ಬಣ್ಣದ ಮಿಶ್ರಣವಿರುವ ಸಮವಸವನ್ನು ಧರಿಸಿ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲ ವರ್ಷಗಳಿಂದ ಪೌರಕಾರ್ಮಿಕರ ಸಂಘವು ಯೂನಿಫಾರಂ ಬಣ್ಣವನ್ನು ಬದಲಿಸುವಂತೆ ಪಾಲಿಕೆ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದ್ದರು. ಇದನ್ನು ಮಾನ್ಯ ಮಾಡಿರುವ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಈ ಸಾಲಿನಿಂದಲೇ ಹೊಸ ವರ್ಣದ ಸಮವಸವನ್ನು ನೀಡಲು ಟೆಂಡರ್ ಆಹ್ವಾನಿಸಲಾಗಿದೆ ಎಂದು ಬುಧವಾರ ತಿಳಿಸಿದ್ದಾರೆ.
ಕಾಯಂ ಆಗಿರುವ 17 ಸಾವಿರ ಪೌರಕಾರ್ಮಿಕರಿಗೆ ಸಮವಸ ವಿತರಿಸಲಾಗುವುದು. ಮುಂದಿನ ಅಕ್ಟೋಬರ್ ವೇಳೆಗೆ ಎಲ್ಲರಿಗೂ ಲಭ್ಯವಾಗಲಿದೆ. ಇದಕ್ಕಾಗಿ ಅಗತ್ಯ ಅನುದಾನ ಕೂಡ ದೊರೆತಿದೆ. ಹಾಗಾಗಿ ಯೂನಿಫಾರಂ ವಿತರಣೆಯಲ್ಲಿ ವಿಳಂಬವಾಗದು ಎಂದು ಸ್ಪಷ್ಟಪಡಿಸಿದ್ದಾರೆ.
ಪುರುಷ ಪೌರಕಾರ್ಮಿಕರಿಗೆ ಒಂದು ಟ್ರ್ಯಾಕ್ ಪ್ಯಾಂಟ್, ಟೀ ಶರ್ಟ್ ಟೋಪಿ ವಿತರಿಸಲಾಗುತ್ತಿದ್ದು, ಇದರ ಒಂದು ಜೊತೆ ಸಮವಸದ ಬೆಲೆ 3,578 ರೂ. ಆಗಿದೆ. ಮಹಿಳಾ ಪೌರಕಾರ್ಮಿಕರಿಗೆ ತಲಾ 2 ಸೀರೆ, ಟೋಪಿ, ಸ್ವೆಟರ್ ಹಾಗೂ ಕೋಟು ನೀಡಲಾಗುತ್ತಿದ್ದು, ಇದರ ಬೆಲೆ 4,811 ರೂ. ಆಗಿರುತ್ತದೆ. ಪಾಲಿಕೆ ಕ್ರಮವನ್ನು ಪೌರಕಾರ್ಮಿಕರ ಸಂಘವು ಸ್ವಾಗತಿಸಿದೆ.