ಕುಸಿದು ಬಿದ್ದಿದೆ ಅರೇಹಳ್ಳಿ ಸರ್ಕಾರಿ ಶಾಲೆ ಕಾಂಪೌಂಡ್
ಬೇಲೂರು : ತಾಲೂಕಿನ ಮಲೆನಾಡು ಭಾಗದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ.
ಬುಧವಾರವೂ ವರ್ಷಧಾರೆ ಮುಂದುವರಿದಿದೆ. ಅರೇಹಳ್ಳಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಮಂಗಳವಾರ ರಾತ್ರಿ ಕುಸಿದು ಬಿದ್ದಿರುವುದೂ ಸೇರಿದಂತೆ ತಾಲೂಕಿನ ವಿವಿಧೆಡೆಸಾರ್ವಜನಿಕ ಆಸ್ತಿ, ಬೆಳೆಗಳಿಗೆ ಹಾನಿ ಉಂಟಾಗಿದೆ.
ಕಳೆದ 10 ವರ್ಷದ ಹಿಂದೆ ಅರೇಹಳ್ಳಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುತ್ತಲೂ ಕಾಂಪೌಂಡ್ ನಿರ್ಮಿಸಲಾಗಿತ್ತು. ಆದರೆ ಕಳೆದ ಎ2-3 ವರ್ಷಗಳಿಂದ ನಿರಂತರ ಮಳೆ ಹಾಗೂ ಇತ್ತೀಚಿನ ದಿನಗಳಲ್ಲಿ ಸುರಿದ ಜೋರು ಮಳೆ, ಗಾಳಿಯಿಂದಾಗಿ ಶಾಲಾ ಕಾಂಪೌಂಡ್‌ನ ಒಂದು ಬದಿ ನೆಲಕ್ಕುರುಳಿದೆ. ಇದರೊಂದಿಗೆ ಪಕ್ಕದಲ್ಲಿರುವ ರೈತ ಸಂಪರ್ಕ ಕೇಂದ್ರದ ಕಟ್ಟಡದ ಸುತ್ತಲೂ ಅಳವಡಿಸಿದ್ದ
ಸಿಮೆಂಟಿನ ಇಂಟರ್ ಲಾಕ್‌ಗೂ ಸಾಕಷ್ಟು ಹಾನಿಯಾಗಿದೆ. ಮೊದಲೇ ಗಾಳಿ, ಮಳೆಗೆ ಶಿಥಿಲವಾಗಿದ್ದ ಕಾಂಪೌಂಡ್ (ಈಗ ಸುರಿದ ಮಳೆಗೆ ) ಮತ್ತು ರೈತ ಸಂಪರ್ಕ ಕೇಂದ್ರದ ಕಟ್ಟಡದ ಮಳೆ ನೀರೂ ಇದರ ಮೇಲೆಯೇ ಬೀಳುತ್ತಿದ್ದ ಕಾರಣ ಕುಸಿದು ಬಿದ್ದಿದೆ.
ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯವರು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಠಿಯಿಂದ ಕಟ್ಟಡಕ್ಕೆ ಯಾವುದೇ ಹಾನಿಯಾಗದಂತೆ ಮತ್ತು ಅನಾಹುತವಾಗದಂತೆ ಎಚ್ಚರ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.