ಮಂಡ್ಯ: ವಿಧಾನಸಭಾ ಚುನಾವಣೆ ಅಬ್ಬರದ ನಡುವೆ ರಾಜ್ಯದಲ್ಲಿ ಗಣನೀಯವಾಗಿ ರಕ್ತದ ಕೊರತೆ ಎದುರಾಗಿದೆ.
ಮಾದರಿ ನೀತಿ ಸಂಹಿತೆ ಹಾಗೂ ಚುನಾವಣೆ ಪ್ರಚಾರದ ನಡೆಯುತ್ತಿರುವುದರಿಂದ ಶಿಬಿರಗಳ ಆಯೋಜನೆ ಪ್ರಮಾಣ ಇಳಿಮುಖವಾಗಿದೆ. ಸ್ವಯಂ ಪ್ರೇರಿತರಾಗಿ ಬಂದು ರಕ್ತ ಕೊಡುವವರ ಸಂಖ್ಯೆಯೂ ಕಡಿಮೆಯಾಗಿದೆ. ಪರಿಣಾಮ ಚುನಾವಣೆಗೆ ಮುನ್ನವಿದ್ದ ಸಂಗ್ರಹವಿಲ್ಲ. ಇದರಿಂದಾಗಿ ಕೆಲ ಅನಿವಾರ್ಯ ಪರಿಸ್ಥಿತಿಯಲ್ಲಿ ಪರದಾಡುವಂತಾಗಿದೆ.
ಗಣನೀಯ ಪ್ರಮಾಣದ ಇಳಿಕೆ: ರಕ್ತ ಸಂಗ್ರಹದ ವಿಚಾರದಲ್ಲಿ ಮಂಡ್ಯ ಜಿಲ್ಲೆಯ ಸದಾ ಮುಂದಿರುತ್ತದೆ. ವರ್ಷದಲ್ಲಿ ಹೆಚ್ಚು ರಕ್ತ ಸಂಗ್ರಹ ಮಾಡುವ ಜಿಲ್ಲೆಗಳ ಪೈಕಿ ಮಂಡ್ಯವೂ ಇದೆ. ಆದರೆ ಚುನಾವಣೆ ಅಬ್ಬರದಲ್ಲಿ ರಕ್ತದಾನ ಶಿಬಿರ ಆಯೋಜನೆಯಾಗುತ್ತಿಲ್ಲ. ಚುನಾವಣೆಗೆ ಮುನ್ನ ಪ್ರತಿ ತಿಂಗಳು ಹತ್ತಾರೂ ಶಿಬಿರಗಳನ್ನು ಆಯೋಜಿಸಿ 700 ರಿಂದ 800 ಯುನಿಟ್ ರಕ್ತವನ್ನು ಸಂಗ್ರಹಿಸಲಾಗುತ್ತಿತ್ತು. ಆದರೀಗ ಇದರ ಪ್ರಮಾಣ 500ರೊಳಗೆ ಇಳಿಕೆಯಾಗಿದೆ.
ಜಿಲ್ಲೆಯಲ್ಲಿ ಪ್ರತಿ ತಿಂಗಳು ಸುಮಾರು 1200 ಯುನಿಟ್ ರಕ್ತದ ಬೇಡಿಕೆ ಇರುತ್ತದೆ. ಇದೀಗ ಪ್ರಮಾಣ ಕಡಿಮೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಆದಾಗ್ಯೂ ಅವಶ್ಯಕತೆ ಇರುವವರಿಗೆ ರಕ್ತವನ್ನು ಒದಗಿಸುವ ಕೆಲಸವನ್ನು ಮಿಮ್ಸ್ ರಕ್ತನಿಧಿ ಕೇಂದ್ರ ಮಾಡುತ್ತಿದೆ. ಒಂದು ವೇಳೆ ಸಂಗ್ರಹವಿಲ್ಲದಿದ್ದರೆ ಸಂಘಟನೆಗಳನ್ನು ಸಂಪರ್ಕಿಸಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇನ್ನು ರಾಜ್ಯದಲ್ಲಿ ಪ್ರತಿ ವರ್ಷ 8 ಲಕ್ಷ ಯುನಿಟ್ ರಕ್ತದ ಅವಶ್ಯಕತೆ ಇದ್ದು, ಈ ಪೈಕಿ ಸುಮಾರು 7 ಲಕ್ಷ ಯುನಿಟ್‌ನಷ್ಟು ಲಭ್ಯತೆ ಇದೆ. ಆದರೆ ಇದೀಗ ಚುನಾವಣೆ ಕಾರಣಕ್ಕೆ ಶೇ.40ರಷ್ಟು ಕಡಿಮೆಯಾಗಿದೆ. ದೇಶದಲ್ಲಿ ಪ್ರತಿ ವರ್ಷ 5 ಕೋಟಿ ಯುನಿಟ್ ರಕ್ತಕ್ಕೆ ಬೇಡಿಕೆ ಇದ್ದು, ಇದರಲ್ಲಿ 2.5 ಕೋಟಿ ಯುನಿಟ್ ಸಿಗುತ್ತಿದೆ. ಕೋವಿಡ್ ಸಮಯದಲ್ಲಿ ಇಂತಹ ಪರಿಸ್ಥಿತಿ ತಲೆದೊರಿತ್ತು.
ಶಿಬಿರ ಆಯೋಜನೆ ಸುಲಭವಲ್ಲ: ಚುನಾವಣೆ ವೇಳೆ ಶಿಬಿರ ಆಯೋಜಿಸುವುದು ಸುಲಭವಲ್ಲ. ಈ ಬಗ್ಗೆ ಆಯೋಜಕರು ಹೆಚ್ಚಿನ ಗಮನಹರಿಸಬೇಕಿದೆ. ರಾಜಕೀಯ ಪಕ್ಷದ ಬಾವುಟ, ಬ್ಯಾನರ್, ಭಾಷಣ ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ ಪ್ರಕರಣ ನಡೆಯಬಾರದು. ಒಂದು ವೇಳೆ ಉಲ್ಲಂಘಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳುವ ಭಯವಿದೆ.
ಮಾತ್ರವಲ್ಲದೆ ಜಿಲ್ಲೆಯ ಕಾಲೇಜುಗಳಲ್ಲಿಯೂ ಹೆಚ್ಚಿನ ಶಿಬಿರ ಆಯೋಜನೆಗೊಳ್ಳುತ್ತಿದ್ದವು. ಇದೀಗ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವುದರಿಂದ ಶಿಬಿರಗಳು ಇಲ್ಲದಾಗಿದೆ. ಅತ್ತ ಹಳ್ಳಿಗಳಲ್ಲಿ ಶಿಬಿರ ಆಯೋಜಿಸಲು ಯುವಕರು ಆಸಕ್ತಿ ತೋರುತ್ತಿಲ್ಲ. ಕಾರಣ ಚುನಾವಣೆಯಲ್ಲಿ ನಿರತರಾಗಿದ್ದಾರೆ.
ಸ್ವಯಂ ಪ್ರೇರಿತರಾಗಿ ಬನ್ನಿ: ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಮಾಣ ಹೆಚ್ಚಾಗಿರುತ್ತದೆ. ಅದರಲ್ಲಿಯೂ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಿರಂತರವಾಗಿ ನಡೆಯುತ್ತಿದೆ. ಈ ವೇಳೆ ರಕ್ತದ ಅವಶ್ಯಕತೆ ಹೆಚ್ಚಿದೆ. ಅಂತೆಯೇ ಹೆರಿಗೆ ಸಮಯದಲ್ಲಿಯೂ ಬೇಡಿಕೆ ಇರುವುದರಿಂದ ತುರ್ತಾಗಿ ಒದಗಿಸುವುದು ಸವಾಲಿನ ಕೆಲಸವಾಗುತ್ತಿದೆ.
ಚುನಾವಣೆಯಲ್ಲಿ ಪಾಲ್ಗೊಳ್ಳುವುದು ಮುಖ್ಯವಾದರೂ ಮತ್ತೊಂದು ಜೀವ ಉಳಿಸುವ ಮಹತ್ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯವಂತ ಎಲ್ಲರೂ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕಿದೆ. ಈ ನಿಟ್ಟಿನಲ್ಲಿ ಮಿಮ್ಸ್ ಬ್ಲಡ್ ಕ್ಯಾಂಪ್‌ಗೆ ಬಂದು ರಕ್ತದಾನ ಮಾಡಬಹುದು. ಶಿಬಿರಗಳನ್ನು ಆಯೋಜಿಸಿಕೊಂಡು ಬರುತ್ತಿರುವ ಸಂಘಟನೆಗಳು ಯುವ ಸಮೂಹದ ಮನವೊಲಿಕೆ ಮಾಡಬೇಕಿದೆ. ರಕ್ತದಾನ ಮಾಡುವ ಮೂಲಕ ಮಹಾದಾನಿಗಳಾಗಬೇಕಿದೆ ಎಂದು ಮಿಮ್ಸ್ ಬ್ಲಡ್‌ಬ್ಯಾಂಕ್ ವೈದ್ಯಾಧಿಕಾರಿ ಡಾ.ಮುರುಳೀಧರ್ ಮನವಿ ಮಾಡಿಕೊಂಡರು.