ಜಿಲ್ಲೆ

ಸಂವಿಧಾನ ಬದಲಿಸಿದರೆ ರಕ್ತ ಕ್ರಾಂತಿ: ಮಾಜಿ ಮೇಯರ್ ಪುರುಷೋತ್ತಮ್ ಎಚ್ಚರಿಕೆ

ಮೈಸೂರು: ಆರ್‌ಎಸ್‌ಎಸ್‌ನ ಕುಮ್ಮಕ್ಕಿನಿಂದ ಕೇಂದ್ರ ಸರ್ಕಾರ ಸಂವಿಧಾನದ ಆಶಯಗಳನ್ನು ತಿರುಚುವ ಮತ್ತು ಸಂವಿಧಾನವನ್ನು ಬದಲಿಸುವ ಕುತಂತ್ರಕ್ಕೆ ಮುಂದಾದರೆ ದೇಶದಾದ್ಯಂತ ರಕ್ತಕ್ರಾಂತಿ ನಡೆಯಲಿದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ಎಚ್ಚರಿಸಿದರು.

ಆರ್‌ಎಸ್‌ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಅವರು ಸಂವಿಧಾನದಲ್ಲಿರುವ ಜಾತ್ಯತೀತ ಮತ್ತು ಸಮಾಜವಾದ ಪದಗಳನ್ನು ತೆಗೆದು ಹಾಕಬೇಕು ಎಂದು ಹೇಳಿದ್ದಾರೆ. ಆದರೆ ದೇಶದ ಬಹುಜನರು ಜಾತ್ಯತೀತ ಮತ್ತು ಸಮಾಜವಾದ ಮಾತ್ರವಲ್ಲ ಸಂವಿಧಾನದ ಒಂದು ಪದವನ್ನೂ ತೆಗೆಯಲು ಬಿಡುವುದಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಾತ್ಯತೀತ ಎಂಬ ಪದ ವಿದೇಶದಿಂದ ಬಂದಿದೆ. ಆದ್ದರಿಂದ ಈ ಪದಗಳನ್ನು ಸಂವಿಧಾನದಿಂದ ತೆಗೆಯಬೇಕು ಎಂಬುದು ಆರ್‌ಎಸ್‌ಎಸ್ ವಾದವಾಗಿದೆ. ಆದರೆ ರೈಲು, ಬಸ್, ಕಾರ್, ದೂರದರ್ಶನ ಇತ್ಯಾದಿಗಳನ್ನೂ ವಿದೇಶಿಯರೇ ಕಂಡುಹಿದಿದ್ದಾರೆ. ವಿದೇಶಿಗರ ಪದವಾದ ಜಾತ್ಯತೀತತೆ ಬೇಡ ಎನ್ನುವವರು ವಿದೇಶಿಗರು ಕಂಡುಹಿಡಿದ ವಸ್ತುಗಳನ್ನು ಏಕೆ ಬಳಸುತ್ತಾರೆ ಎಂದು ಪ್ರಶ್ನಿಸಿದರು.

ದಲಿತ ಸಂಘರ್ಷ ಸಮಿತಿ ಹಿರಿಯ ಮುಖಂಡ ಹರಿಹರ ಆನಂದಸ್ವಾಮಿ, ಸಾಹಿತಿ ಅಶೋಕಪುರಂ ಸಿದ್ದಸ್ವಾಮಿ, ಅಶೋಕಪುರಂ ದೊಡ್ಡಗರಡಿ ಅಧ್ಯಕ್ಷ ಮಹೇಶ್, ಆದಿ ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಸಿದ್ದರಾಜು, ಸೋಮಯ್ಯ ಮಲೆಯೂರು, ಸಿ.ಹರಕುಮಾರ್, ನಾಗರಾಜು ಇತರರು ಇದ್ದರು.