ಮಾನ್ವಿ: ವಿದ್ಯಾರ್ಥಿಗಳ ರಕ್ತದ ಮಾದರಿ ಪರೀಕ್ಷಿಸಿ ರಕ್ತಹೀನತೆಯಿಂದ ಬಳಲುವವರನ್ನು ಗುರುತಿಸಿ ಹಿಮೋಗ್ಲೊಬಿನ್ ಅಂಶ ಹೆಚ್ಚಳಕ್ಕೆ ವಿಪ್ಸ್ ಮಾತ್ರೆಗಳನ್ನು ನೀಡಲಾಗುತ್ತದೆ ಎಂದು ವೈದ್ಯಾಧಿಕಾರಿ ಗುರುನಾಥ ರೆಡ್ಡಿ ತಿಳಿಸಿದರು.
ಪೋತ್ನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಶಿಕ್ಷಣ ಇಲಾಖೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅನಿಮಿಯಾಮುಕ್ತ ಪೌಷ್ಟಿಕ ಕರ್ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರ ಅಪೌಷ್ಟಿಕತೆ ನಿವಾರಣೆಗಾಗಿ ಶಾಲೆಯಲ್ಲಿ ತರಕಾರಿ,
ಬಾಳೆಹಣ್ಣು, ಮೊಟ್ಟೆ ಸೇರಿ ಪೌಷ್ಟಿಕ ಆಹಾರವನ್ನು ಬಿಸಿಯೂಟದಲ್ಲಿ ನೀಡಲಾಗುತ್ತಿದೆ. ದೇಹದಲ್ಲಿ ರಕ್ತ ಉತ್ಪನ್ನವಾಗುವ ಆಹಾರ ಪದಾರ್ಥಗಳಾದ ಶೇಂಗಾ, ಬೆಲ್ಲ, ಹಣ್ಣು, ಹಸಿರು ತರಕಾರಿ, ಕಾಯಿಪಲ್ಲೆ, ಮಾಂಸ, ಮೊಳಕೆ ಕಾಳುಗಳನ್ನು ಸೇವಿಸಬೇಕು ಎಂದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಮಾತನಾಡಿ, ದೇಹದಲ್ಲಿ ಅಗತ್ಯಕ್ಕಿಂತ ರಕ್ತದ ಪ್ರಮಾಣ ಕಡಿಮೆ ಇರುವುದನ್ನು ರಕ್ತಹೀನತೆ ಎನ್ನುತ್ತೇವೆ. ಆರೋಗ್ಯವಂತ ಮಹಿಳೆಯರ ರಕ್ತದಲ್ಲಿ ಹಿಮೋಗ್ಲೊಬಿನ್ ಅಂಶ 12 ಹಾಗೂ ಪುರುಷರಲ್ಲಿ 14 ರಷ್ಟಿರಬೇಕು. ಇದಕ್ಕಿಂತ ಕಡಿಮೆಯಿದ್ದಲ್ಲಿ ರಕ್ತಹೀನತೆಯ ಲಕ್ಷಣಗಳಾದ ನಿಶ್ಯಕ್ತಿ, ಆಯಾಸ, ಕಲಿಕೆಯಲ್ಲಿ ಕುಂಠಿತಗೊಳ್ಳುತ್ತದೆ ಎಂದರು.
ಆಸ್ಪತ್ರೆಯ ಪ್ರಯೋಗ ಶಾಲಾ ತಂತ್ರಜ್ಞಾಧಿಕಾರಿಸಂಗೀತಾ ವಿದ್ಯಾರ್ಥಿಗಳ ರಕ್ತದ ಮಾದರಿ ಪಡೆದು, ಪರೀಕ್ಷೆ ಮಾಡಿದರು. ಮುಖ್ಯಶಿಕ್ಷಕ ವಲಿಬಾಬು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶರಣಪ್ಪ, ಕರ್ನಾಟಕ ಜನಜಾಗೃತಿ ಸಮಿತಿ ಅಧ್ಯಕ್ಷ ಏಸಪ್ಪ, ಶರಣಪ್ಪ, ಆಶಾ ಕಾರ್ಯಕರ್ತೆ ಉಮಾದೇವಿ ಇತರರಿದ್ದರು.