ಜಿಲ್ಲೆ

ಯುವಜನರು ರಕ್ತದಾನ ಮಾಡಿ ಮಾದರಿಯಾಗಿ: ಡಿಸಿ ಡಾ.ಎಚ್.ಎನ್.ಗೋಪಾಲಕೃಷ್ಣ ಕಿವಿಮಾತು

ಕೆ.ಎನ್.ರಾಘವೇಂದ್ರ

ಮಂಡ್ಯ: ಯುವಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು. ಈ ನಿಟ್ಟಿನಲ್ಲಿ ಇತರರಿಗೆ ಮಾದರಿಯಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಕಿವಿಮಾತು ಹೇಳಿದರು.

ನಗರದ ಮಾಂಡವ್ಯ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ರಕ್ತದಾನಿಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ದೇಹದಲ್ಲಿ 5 ರಿಂದ 6 ಲೀಟರ್ ರಕ್ತ ಇರುತ್ತದೆ. ಅದರಲ್ಲಿ ಒಂದು ಬಾರಿ ರಕ್ತ ದಾನ ಮಾಡಿದಾಗ 350 ಎಂ.ಎಲ್ ರಕ್ತ ತೆಗೆದುಕೊಳ್ಳುತ್ತಾರೆ. ಅದು ಮತ್ತೆ 120 ದಿನಗಳಲ್ಲಿ ದೇಹದಲ್ಲಿ ಉತ್ಪತ್ತಿಯಾಗಿ ಚೇತರಿಕೆಯಾಗುತ್ತದೆ. ಹಾಗಾಗಿ ರಕ್ತದಾನದ ಬಗ್ಗೆ ಭಯ ಬೇಡ. ಜಿಲ್ಲೆಯಲ್ಲಿ ಪ್ರತಿ ತಿಂಗಳಿಗೆ 1200 ಯೂನಿಟ್ ರಕ್ತದ ಅವಶ್ಯಕತೆ ಇದೆ. ಇದರಲ್ಲಿ 650 ಯೂನಿಟ್ ಮಾತ್ರ ರಕ್ತ ಸಿಗುತ್ತಿದೆ. ಆದ್ದರಿಂದ ಸಾರ್ವಜನಿಕರು ರಕ್ತದಾನ ಮಾಡಿ ಜೀವ ಉಳಿಸಿ ಎಂದು ಮನವಿ ಮಾಡಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಜಿಲ್ಲೆಯ ಅಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಸಹಕಾರದಿಂದ ರಕ್ತದಾನದ ಸಪ್ತಾಹ ಮಾಡಿದ್ದರಿಂದ ಒಂದು ವಾರಕ್ಕೆ 700 ಯುನಿಟ್ ರಕ್ತ ಸಂಗ್ರಹವಾಗಿದೆ. ಇದಕ್ಕೆ ಸಹಕರಿಸಿ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ಜಿಲ್ಲೆಯು ರಕ್ತದಾನದಲ್ಲಿ ಮಾಡುವುದರಲ್ಲಿ ಮುಂಚೂಣಿಯಲ್ಲಿದೆ ಎನ್ನುವುದು ಸಂತೋಷದ ವಿಷಯ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸೀಫ್, ಮಾಂಡವ್ಯ ಶಿಕ್ಷಣ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎಂ.ಎನ್.ಆಶಾಲತಾ, ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ, ನೋಡಲ್ ಅಧಿಕಾರಿ ಡಾ.ಎಚ್.ಆರ್.ಅರುಣಾನಂದ, ರಕ್ತನಿಧಿ ಕೇಂದ್ರದ ಮುಖ್ಯಸ್ಥ ಮುರಳೀಧರ್ ಭಟ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಆರ್.ಶಶಿಧರ್ ಇತರರಿದ್ದರು.