ಜಿಲ್ಲೆ

ಶ್ರೀರಂಗಪಟ್ಟಣದಲ್ಲಿ ಬೃಹತ್ ರಕ್ತದಾನ ಶಿಬಿರ

ಶ್ರೀರಂಗಪಟ್ಟಣ : ಪಟ್ಟಣದ ಓಂ ಶ್ರೀನಿಕೇತನ ಟ್ರಸ್ಟ್, ರೋಟರಿ ಸಂಸ್ಥೆ, ಉದ್ಯೋಗದಾತ ಸಂಸ್ಥೆ ಕಾನೂನು ಸೇವಾ ಸಮಿತಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ 90 ಯೂನಿಟ್ ರಕ್ತ ಸಂಗ್ರಹವಾಯಿತು. ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ಸ್ವಾಮಿ ವಿವೇಕಾನಂದ, ಶ್ರೀ

ಬಾಲ ಗಂಗಾಧರನಾಥ ಸ್ವಾಮೀಜಿ ಹಾಗೂ ಸುಭಾಷ್‌ಚಂದ್ರಬೋಸ್ ಜಯಂತ್ರೋತ್ಸವದೊಂದಿಗೆ ಮಾಜಿ ಮುಖ್ಯಮಂತ್ರಿ ದಿ. ಎಸ್.ಎಂ.ಕೃಷ್ಣ ಸ್ಮರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಿಬಿರವನ್ನು ಪಟ್ಟಣ ನ್ಯಾಯಾಲಯದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಎಂ.ಡಿ.ರೂಪಾ ಹಾಗೂ ಪರಿವರ್ತನ ಸಂಸ್ಥೆ ಅಧ್ಯಕ್ಷ ಡಾ.ಎಂ.ಪುಟ್ಟೇಗೌಡ ಉದ್ಘಾಟಿಸಿದರು. ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು. ಅವರೊಂದಿಗೆ ಇತರೆ ಮುಖಂಡರು ಹಾಗೂ ಸಾರ್ವಜನಿಕರು ರಕ್ತವನ್ನು ದಾನ ಮಾಡಿದರು. ಮಂಡ್ಯದ ಮಿಮ್ಸ್ ಹಾಗೂ ಮೈಸೂರಿನ ಕೆ.ಆರ್. ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಸಿಬ್ಬಂದಿ ಸಹಕರಿಸಿದರು.

ಶ್ಲಾಘನೀಯ ಕಾರ್ಯ: ನ್ಯಾಯಾಧೀಶೆ ಎಂ.ಡಿ.ರೂಪಾ ಮಾತನಾಡಿ, ತುರ್ತು ಪರಿಸ್ಥಿತಿಯಲ್ಲಿ ರಕ್ತದ ಕೊರತೆ ನೀಗಿಸಲು ಹಮ್ಮಿಕೊಳ್ಳುವಂತಹ ಇಂತಹ ಕಾರ್ಯ ಶ್ಲಾಘನೀಯ ಎಂದರು. ರಕ್ತದಾನ ಮಾಡುವುದರಿಂದ ಮತ್ತೊಂದು ಜೀವಕ್ಕೆ ನೆರವಾಗುವ ಜತೆಗೆ ದಾನಿಗಳ ದೇಹದಲ್ಲೂ ಹೊಸ ರಕ್ತದ ಉತ್ಪಾದನೆ ಮೂಲಕ ರೋಗ ನಿರೋಧಕ ಶಕ್ತಿ ಜಾಗೃತಗೊಳ್ಳಲಿದೆ ಎಂದರು.

ಮಹನೀಯರ ಸ್ಮರಣೆ: ಡಾ.ಎಂ.ಪುಟ್ಟೇಗೌಡ ಮಾತನಾಡಿ ನಮ್ಮ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ ಹಲವು ಮಹನೀಯರನ್ನು ಇಂತಹ ಸಾಮಾಜಿಕ ಕಾರ್ಯಗಳ ಆಯೋಜನೆ ಮೂಲಕ ಸ್ಮರಿಸುವುದು ಮಾದರಿ ಎಂದರು. ಪೊಲೀಸ್ ಇಲಾಖೆ, ಪುರಸಭೆ , ಕಸಾಪ, ತಾಪಂ ಸೇರಿದಂತೆ ತಾಲೂಕು ಆಡಳಿತದ ವಿವಿಧ ಇಲಾಖೆಗಳು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಸಹಕಾರ ನೀಡಿದರು.

ಸಿವಿಲ್ ನ್ಯಾಯಾಧೀಶರಾದ ಹರೀಶ್ ಕುಮಾರ್, ಅಪರ ಸಿವಿಲ್ ನ್ಯಾಯಾಧೀಶ ಹನುಮಂತರಾಯಪ್ಪ, ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ, ಉದ್ಯೋಗದಾತ ಸಂಸ್ಥೆ ಮುಖ್ಯಸ್ಥ ರುಕ್ಮಾಂಗದ, ರೋಟರಿ ಸಂಸ್ಥೆಯ ಮುಖ್ಯಸ್ಥ ಡಾ.ಆರ್.ರಾಘವೇಂದ್ರ, ಕಸಾಪ ನಗರ ಘಟಕ ಅಧ್ಯಕ್ಷೆ ಸರಸ್ವತಿ, ರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ ಇತರರು ಇದ್ದರು.