ಮಡಿಕೇರಿ: ಯುಗಾದಿ ಹಬ್ಬ ಹಾಗೂ ರಂಜಾನ್ ಹಬ್ಬಗಳ ಪರ್ವ ದಿನ, ಮಡಿಕೇರಿಯ ಲಯನ್ಸ್ ಕ್ಲಬ್‌ನಲ್ಲಿ ನೀಮಾ ಕೊಡಗು, ನೀಮಾ ಮಹಿಳಾ ಘಟಕ ಕೊಡಗು, ಕೊಡಗು ಬ್ಲಡ್ ಡೋನರ್ಸ್ ಕೊಡಗು, ಕೊಡಗು ಹವ್ಯಕ ವಲಯ ಹಾಗೂ ಮಡಿಕೇರಿ ಲಯನ್ಸ್ ಕ್ಲಬ್‌ಗಳ ಜಂಟಿ ಆಶ್ರಯದಲ್ಲಿ ಸಂವೇದನಾ-೨ ಎಂಬ ಹೆಸರಿನಲ್ಲಿ ರಕ್ತದಾನದ ಬೃಹತ್ ಶಿಬಿರ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ನೀಮಾ ಕೊಡಗು ಅಧ್ಯಕ್ಷ ಡಾ.ರಾಜಾರಾಮ್ ಮಾತನಾಡಿ, ದಾನ ಎನ್ನುವುದು ಜೀವನದ ಅತ್ಯಂತ ಶ್ರೇಷ್ಠ ಕರ್ಮಗಳಲ್ಲಿ ಒಂದು. ದಾನದ ಮೂಲಕ ಜೀವನ ವೃದ್ಧಿಯಾಗಲಿದೆ. ಹಬ್ಬದ ದಿನ ರಕ್ತದಾನದ ಮೂಲಕ ಇತರರಿಗೆ ಜೀವನದಾನ ನೀಡುವುದರಿಂದ ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು. ಎಲ್ಲರೂ ರಕ್ತದಾನದ ಬಗ್ಗೆ ಜಾಗೃತರಾಗಿ ಇತರ ಜೀವಗಳನ್ನು ಉಳಿಸಲು ಸಹಕರಿಸುವಂತಾಗಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಡಿಕೇರಿ ವೈದ್ಯಕೀಯ ಕಾಲೇಜಿನ ರಕ್ತ ನಿಧಿ ಕೇಂದ್ರದ ಮುಖ್ಯ ನಿರ್ವಹಣಾಧಿಕಾರಿ ಡಾ.ಕರುಂಬಯ್ಯ ರಕ್ತದಾನದ ಮಹತ್ವ ಹಾಗೂ ರಕ್ತದಾನಿಗಳಿಗೆ ಜಾಗೃತಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ ಅಧ್ಯಕ್ಷ ಸುಕುಮಾರ್ ಲಯನ್ಸ್ ಕ್ಲಬ್ ಮಡಿಕೇರಿ ಅಧ್ಯಕ್ಷ ನಟರಾಜ್, ಲಯನ್ಸ್ ಟ್ರಸ್ಟ್ ಅಧ್ಯಕ್ಷ ನವೀನ್ ಅಂಬೇಕಲ್ ರಕ್ತದಾನದ ಮಹತ್ವಗಳ ಬಗ್ಗೆ ತಿಳಿಸಿದರು.
ಕೊಡಗು ಹವ್ಯಕವಲಯದ ಕಾರ್ಯದರ್ಶಿ ಶ್ರೀಪತಿ, ಧನಂಜಯ ಶಾಸ್ತ್ರಿ, ರಘುನಂದನ್, ಚಿತ್ತರಂಜನ್, ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ ಮೈಕಲ್, ೮೬ನೇ ಬಾರಿ ರಕ್ತದಾನ ಮಾಡಿದ ಆಶ್ರಫ್ ಹಾಗೂ ಅನೇಕರು ಉಪಸ್ಥಿತರಿದ್ದರು.
೫೩ ರಕ್ತದಾನಿಗಳು ಹೆಸರನ್ನು ನೋಂದಾಯಿಸಿಕೊಂಡಿದ್ದು, ಅದರಲ್ಲಿ ಅವಶ್ಯಕತೆ ಇದ್ದ ೩೨ ರಕ್ತದ ಯೂನಿಟ್ ರಕ್ತವನ್ನು ರಕ್ತ ನಿಧಿಗೆ ಕೇಂದ್ರಕ್ಕೆ ಪಡೆದು ಕೊಳ್ಳಲಾಯಿತು. ಸಭಾ ಕಾರ್ಯಕ್ರಮವನ್ನು ಡಾ.ಸೌಮ್ಯ ನಿರೂಪಿಸಿ ಡಾ.ಶೈಲಜಾ ರಾಜೇಂದ್ರ ಸ್ವಾಗತಿಸಿದರು. ನೀಮಾ ವತಿಯಿಂದ ಡಾ.ಉದಯ ಶಂಕರ್, ಡಾ.ಈಶ್ವರೀ ಉದಯ ಶಂಕರ್, ಡಾ.ಮಹೇಶ್, ಡಾ.ಪದ್ಮನಾಭ, ಡಾ.ಜ್ಯೋತಿ ರಾಜಾರಾಮ ಹಾಗೂ ಇತರರು ಹಾಜರಿದ್ದರು.
ದೇಶದಾದ್ಯಂತ ಕಂಡು ಬರುತ್ತಿರುವಂತಹ ರಕ್ತದ ತೀವ್ರ ಕೊರತೆ ಹಿನ್ನಲೆಯಲ್ಲಿ ಈ ರಕ್ತದಾನ ಶಿಬಿರವನ್ನು ಯುಗಾದಿಯಂದು ದೇಶದಾದ್ಯಂತ ನೀಮ ಆಯೋಜಿಸಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಈ ರಕ್ತದಾನ ಶಿಬಿರವು ನಡೆದಿದ್ದು, ಒಟ್ಟು ೧,೫೦,೦೦೦ ರಕ್ತದ ಯುನಿಟ್‌ಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ. ವಿಶ್ವ ದಾಖಲೆಗೆ ಯತ್ನಿಸಲಾಗಿದೆ.
ಡಾ.ರಾಜಾರಾಮ್, ಅಧ್ಯಕ್ಷರು, ನೀಮಾ ಕೊಡಗು