ಕೂಡಿಗೆ: ಮನುಷ್ಯನ ಉತ್ತಮ ಆರೋಗ್ಯಕ್ಕೆ ಆಗಿಂದಾಗ್ಗೆ ರಕ್ತದಾನದಲ್ಲಿ ಪಾಲ್ಗೊಳ್ಳುವುದು ಕೂಡ ಉತ್ತಮ ಬೆಳವಣಿಗೆ ಎಂದು ಮಡಿಕೇರಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಡಾ.ಕೆ.ಪಿ.ಕರುಂಬಯ್ಯ ಹೇಳಿದರು.
ಕೂಡಿಗೆಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಗುರುವಾರ ಮಡಿಕೇರಿಯ ಎಸ್.ವೈ.ಎಸ್ ಸಾಂತ್ವನ ಘಟಕ ಹಾಗೂ ಮಡಿಕೇರಿ ಜಿಲ್ಲಾಸ್ಪತ್ರೆ ವತಿಯಿಂದ ಜಂಟಿಯಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ರಕ್ತಕ್ಕೆ ಪರ್ಯಾಯವಾದ ವ್ಯವಸ್ಥೆಯೇ ಇಲ್ಲ. ಹಾಗಾಗಿ ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ರಕ್ತ ನೀಡಬೇಕಿದೆ. ೧೮ ರಿಂದ ೬೫ರ ವಯೋಮಿತಿಯ ಆರೋಗ್ಯವಂತ ವ್ಯಕ್ತಿಗಳು ಎಲ್ಲರೂ ಮೂರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಧೂಮಪಾನಿಗಳು ಒಂದು ಗಂಟೆ ಬಿಟ್ಟು ರಕ್ತ ನೀಡಬಹುದು. ಬಿಪಿ ಶುಗರ್ ಇರೋರು ಕೂಡ ನೀಡಬಹುದು. ಆದರೆ, ಹೃದಯ ರೋಗಿಗಳು ಕೊಡುವಂತಿಲ್ಲ ಎಂದು ಕರುಂಬಯ್ಯ ವಿವರಿಸಿದರು.
ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ೫ ರಿಂದ ೬ ಲೀಟರ್ ರಕ್ತ ಇರುತ್ತದೆ. ಈ ಪೈಕಿ ೩೫೦ ಮಿಲಿ ಲೀಟರ್ ರಕ್ತ ಮಾತ್ರ ಪಡೆಯಲಾಗುತ್ತದೆ. ಆಗಾಗ್ಗೆ ರಕ್ತದಾನ ಮಾಡಿದರೆ ರಕ್ತದಾನಿಗಳಲ್ಲಿ ಆರೋಗ್ಯ ವೃದ್ಧಿಯಾಗುತ್ತದೆ. ಕೊಬ್ಬಿನಾಂಶ ಕಡಿಮೆಯಾಗುತ್ತದೆ. ಹೃದಯಸಂಬಂಧಿ ಕಾಯಿಲೆಗಳು ದೂರವಾಗುತ್ತದೆ ಎಂದು ಡಾ.ಕರುಂಬಯ್ಯ ಮಾಹಿತಿ ನೀಡಿದರು.
ಸಾಂತ್ವನ ಕೇಂದ್ರದ ಕೊಡಗು ಮುಖ್ಯಸ್ಥರಾದ ಶಾಫಿಯ ಮಾತನಾಡಿ, ಇತ್ತೀಚೆಗೆ ಕಾಶ್ಮೀರದಲ್ಲಿ ಕುರಾನ್ ಹೆಸರು ಹೇಳಿಕೊಂಡು ಜೀವತೆಗೆದ ಉಗ್ರರ ನಿಲುವನ್ನು ಖಂಡಿಸಿದರಲ್ಲದೇ ರಕ್ತದಾನಿಗಳ ರಕ್ತ ಮನುಷ್ಯರಿಗೆ ಎರವಾಗುತ್ತದೆಯೇ ಹೊರತು ಯಾವೊಂದು ಧರ್ಮ ಅಥವಾ ಜಾತಿಯ ವ್ಯಕ್ತಿಗೆ ಸೀಮಿತವಲ್ಲ. ಸಾಂತ್ವನ ಕೇಂದ್ರದ ವತಿಯಿಂದ ಜಿಲ್ಲಾದ್ಯಂತ ತಿಂಗಳಿಗೊಂದು ರಕ್ತದಾನ ಶಿಬಿರ ಆಯೋಜಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ.ಗಿರೀಶ್ ಕುಮಾರ್ ಮಾತನಾಡಿದರು. ಕೂಡಿಗೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೀಪಿಕಾ ಮೂರ್ತಿ, ಜಿಲ್ಲಾ ಆರೋಗ್ಯ ಶಿಕ್ಷಣ ನಿರೀಕ್ಷಕಿ ಎಚ್.ಕೆ.ಶಾಂತಿ, ಡಾ.ನವತೇಜ, ಕೂಡಿಗೆ ಮಸೀದಿಯ ಖತೀಬರಾದ ಹೈದರಾಲಿ, ಶಿಹಾಬುದ್ದೀನ್, ಸಾಂತ್ವನ ಕೇಂದ್ರದ ಕೂಡಿಗೆ ಘಟಕದ ಅಧ್ಯಕ್ಷರ ಜೆ.ಹೆಚ್.ಇಸಾಕ್, ಕಾರ್ಯದರ್ಶಿ ರಜಾಕ್, ಎಸ್‌ವೈಎಸ್ ಕೂಡಿಗೆ ಘಟಕದ ಕಾರ್ಯದರ್ಶಿ ಮೊಹಮ್ಮದಾಲಿ, ಸದಸ್ಯರಾದ ಉಸ್ಮಾನ್, ಜುಬೈರ್, ಹಕೀಫ್, ಟಿ.ಪಿ.ನೌಫಲ್, ಅಬ್ದುಲ್ ಸಲಾಂ ಇದ್ದರು.