ಬೀಳಗಿ: ರಕ್ತದಾನ ಮಾಡುವುದರಿಂದ ಹೃದಯಸಂಬಂಧಿ ರೋಗಗಳನ್ನು ತಡೆದು ಆರೋಗ್ಯದಿಂದಿರಲು ಸಹಾಯಕವಾಗುತ್ತದೆ. ಜತೆಗೆ ಒಬ್ಬರು ರಕ್ತದಾನ ಮಾಡುವುದರಿಂದ ಮೂರು ಜೀವಗಳು ಬದುಕುತ್ತವೆ ಎಂದು ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸ್ಥಳೀಯ ಓಂ ಕ್ರಿಕೆಟ್ ಅಕಾಡೆಮಿ ಆವರಣದಲ್ಲಿ ಪುನೀತ್ ರಾಜಕುಮಾರ್ ಅವರ 50ನೇ ಹುಟ್ಟುಹಬ್ಬದ ಅಂಗವಾಗಿ ಪುನೀತ್ ಮೆಮೊರಿಯಲ್ ಟ್ರಸ್ಟ್, ಧನ್ವಂತರಿ ರಕ್ತನಿಧಿ ಹಾಗೂ ಪಟ್ಟದಕಲ್ಲ ಆಸ್ಪತ್ರೆ ಬೀಳಗಿ ಇವರ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಆರೋಗ್ಯ ಉಚಿತ ತಪಾಸಣೆ ಶಿಬಿರದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ವೈದ್ಯಕೀಯ ಲೋಕದಲ್ಲಿ ಮನುಷ್ಯನ ಯಾವುದೇ ಅಂಗಾಂಗಗಳು ಹೋದರೂ ಅವುಗಳನ್ನು ವೈದ್ಯರು ಜೋಡಣೆ ಮಾಡುತ್ತಾರೆ. ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ರಕ್ತ ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ರಕ್ತದ ಮಹತ್ವ ಅರಿಯಬೇಕಾಗಿದೆ. ಸಮಾಜ ಸೇವೆ ಜತೆಗೆ ಸಮಾಜ ಬಗ್ಗೆ ಚಿಂತನೆ ಮಾಡುವ ಉದ್ದೇಶಕ್ಕಾಗಿ ಸಂಘ, ಸಂಸ್ಥೆಗಳನ್ನು ಹುಟ್ಟು ಹಾಕಬೇಕು. ಇಂತಹ ಕಾರ್ಯವನ್ನು ಪುನೀತ್ ಮೆಮೋರಿಯಲ್ ಟ್ರಸ್ಟ್ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಎಸ್.ಎಚ್. ಯಾಳವಾರಮಠ, ಹಿರಿಯ ಪತ್ರಕರ್ತ ವೀರೇಂದ್ರ ಶೀಲವಂತ ಮಾತನಾಡಿದರು. ಪುನೀತ್ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷೆ ಆಶಾ ಶಾಹೀರ್ ಬೀಳಗಿ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ಒಟ್ಟು 75 ಜನರು ರಕ್ತದಾನ ಮಾಡಿದ್ದಾರೆ. 80 ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. ಪಪಂ ಅಧ್ಯಕ್ಷ ಮುತ್ತು ಬೋರ್ಜಿ, ಉಪಾಧ್ಯಕ್ಷೆ ಕಲಾವತಿ ಗಡ್ಡದ, ಸದಸ್ಯ ರಾಜು ಬೋರ್ಜಿ, ಸಿದ್ದು ಮಾದರ, ಎಂ.ಎಸ್.ಕೋಮಾರ ದೇಸಾಯಿ, ಶಾಹೀರ ಬೀಳಗಿ, ಡಾ.ವಾಶಿಂ ಫೀರೊಜಿ ಪಟ್ಟದಕಲ್ಲ, ಆನಂದ ಹಳ್ಳಿ, ಸೀರಾಜ್ ದಳವಾಯಿ, ಆರೀಫ್ ಬೀಳಗಿ, ವಿಶಾಲಾಕ್ಷ ಹಿರೇಮಠ, ಸುನಂದಾ ದೇಸಾಯಿ ಇದ್ದರು.