ಮಂಡ್ಯ: ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಪರಿನಿರ್ವಾಣ ದಿನದ ಅಂಗವಾಗಿ ಇಲ್ಲಿನ ಗಾಂಧಿನಗರದ 10ನೇ ಕ್ರಾಸ್‌ನ ಡಾ.ಬಿ.ಆರ್.ಅಂಬೇಡ್ಕರ್ ಆಟೋ ನಿಲ್ದಾಣದ ಬಳಿ ಧಮ್ಮ ವಿಜಯ ಬುದ್ಧವಿಹಾರ ಟ್ರಸ್ಟ್, ಜೈ ಭೀಮ್ ಗೆಳೆಯರ ಬಳಗ, ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ), ಭೀಮಸೇನೆ ಕರ್ನಾಟಕದ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
100ಕ್ಕೂ ಹೆಚ್ಚು ಸ್ವಯಂ ಪ್ರೇರಿತ ರಕ್ತದಾನಿಗಳು ನೀಡಿದ ರಕ್ತವನ್ನು ಮಿಮ್ಸ್ ರಕ್ತನಿಧಿ ಕೇಂದ್ರದ ಸಿಬ್ಬಂದಿ ಸಂಗ್ರಹಿಸಿಕೊಂಡರು. ಬಳಿಕ ಅವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ನಟ ಚೇತನ್ ಅಹಿಂಸಾ ಮಾತನಾಡಿ, ಯುವಕರು ರಕ್ತದಾನ ಮಾಡುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸಿಕೊಳ್ಳುತ್ತಿರುವುದು ಮಾದರಿ. ಬಾಬಾಸಾಹೇಬರ ವಿಚಾರ, ವಾದಗಳು, ಮಾರ್ಗದರ್ಶಕವಾಗಿವೆ. ನನ್ನನ್ನು ಪೂಜಿಸಬೇಡಿ, ನನ್ನಂತೆಯೇ ಓದಿ ಎಂದಿರುವ ಮಾತುಗಳು ಸತ್ಯ. ಅಂಬೇಡ್ಕರ್ ಅವರ ವಿಚಾರವನ್ನು ಜನರಿಗೆ ಮುಟ್ಟಿಸಬೇಕಿದೆ. ಅವರ ವಿಚಾರಧಾರೆಗಳು, ರಚನಾತ್ಮಕ ಹೋರಾಟ, ಸೇವೆ ಇವುಗಳನ್ನು ಅತ್ಯಂತ ವೇಗವಾಗಿ ತಲುಪುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕೆಪಿಸಿಸಿ ಸದಸ್ಯೆ ವಿಜಯಲಕ್ಷ್ಮೀ ರಘುನಂದನ್, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ.ಸಿದ್ದಲಿಂಗೇಶ್, ತಾಲೂಕು ಅಧಿಕಾರಿ ಕಾವ್ಯಶ್ರೀ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಪ್ರಕಾಶ್ ಇತರರಿದ್ದರು.