ಜಿಲ್ಲೆ

25 ಯೂನಿಟ್ ರಕ್ತಸಂಗ್ರಹಿಸಿದ ವಿದ್ಯಾರ್ಥಿನಿಯರು: ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಶಿಬಿರ

ಕೆ.ಎನ್.ರಾಘವೇಂದ್ರ

ಮಂಡ್ಯ: ನಗರದ ಮಹಿಳಾ ಸರ್ಕಾರಿ ಕಾಲೇಜಿ(ಸ್ವಾಯತ್ತ)ನಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 25 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ, ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಘಟಕ, ಮಾಂಡವ್ಯ ನಗರ ಲಯನ್ಸ್, ಕೃಷಿಕ ಲಯನ್ಸ್, ಮಿಮ್ಸ್ ರಕ್ತನಿಧಿ ಕೇಂದ್ರ, ಸ್ಪಂದನಾ ಆಸ್ಪತ್ರೆ ಆಯೋಜಿಸಲಾಗಿದ್ದ ಶಿಬಿರದಲ್ಲಿ ವಿದ್ಯಾರ್ಥಿನಿಯರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಅಂತೆಯೇ ಸಂಗ್ರಹಿಸಿದ ರಕ್ತವನ್ನು ಮಿಮ್ಸ್‌ಗೆ ಹಸ್ತಾಂತರ ಮಾಡಲಾಯಿತು.

ಅಂತೆಯೇ ರಕ್ತ ಗುಂಪುಗಳ ವರ್ಗೀಕರಣ, ಆರೋಗ್ಯ ಜಾಗೃತಿ ಹಾಗೂ ತಪಾಸಣೆ, ಪ್ರಾಂಶುಪಾಲರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿದ ರೆಡ್‌ಕ್ರಾಸ್ ಜಿಲ್ಲಾ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ಅಗತ್ಯಯುಳ್ಳವರಿಗೆ ರಕ್ತದಾನ ಸೇರಿದಂತೆ ಸೇವಾ ಕಾರ್ಯ ಮಾಡಿದರೆ ಸಮಾಜ ಸ್ಮರಿಸಿಕೊಳ್ಳುತ್ತದೆ. ರಕ್ತಕ್ಕೆ ರಕ್ತವೇ ಪರ್ಯಾಯ. ಜತೆಗೆ ರಕ್ತದಾನ ಮಾಡುವುದರಿಂದ ಸಾರ್ಥಕ ಭಾವ ನೀಡುತ್ತದೆ. ಯುವ ಮನಸ್ಸುಗಳು ರಕ್ತದಾನ ಮಾಡಿ, ಆರೋಗ್ಯ ಸುಧಾರಣೆಗೆ ಹೆಚ್ಚು ಆದ್ಯತೆ ನೀಡಿ ಎಂದು ಸಲಹೆ ನೀಡಿದರು.

ಕಾಲೇಜಿನ ಯುವ ರೆಡ್‌ಕ್ರಾಸ್ ಸಂಚಾಲಕಿ ಡಾ.ಎಂ.ಬಿ.ಪ್ರಮೀಳಾ ಮಾತನಾಡಿ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ರಕ್ತದಾನದಿಂದಲೂ ಆರೋಗ್ಯ ವೃದ್ದಿಸುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಆಹಾರಕ್ಕೂ ಮತ್ತು ಆರೋಗ್ಯಕ್ಕೂ ಏನು ಸಂಬಂಧ, ಎಂತಹ ಆಹಾರ ಸೇವೆನೆ ಮಾಡಿದರೆ ರಕ್ತ ಹೀನತೆಯಿಂದ ಪಾರಾಗಬಹುದು ಎನ್ನುವುದನ್ನು ಯುವಜನತೆ ತಿಳಿದುಕೊಳ್ಳಬೇಕು ಎಂದು ಕಿವಿಮಾತೇಳಿದರು.

ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ನಿರ್ದೇಶಕ ಕೆ.ಟಿ.ಹನುಮಂತು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವತಿಯರಲ್ಲಿ ರಕ್ತಹೀನತೆ ಹೆಚ್ಚಾಗುತ್ತಿದೆ. ರಕ್ತ ಸಿಗದೆ ಪ್ರತಿದಿನ ಸಾವಿರಾರು ಜನ ಸಾಯುತ್ತಿದ್ದಾರೆ. ಬರೀ ಪುರುಷರೇ ರಕ್ತದಾನ ಮಾಡಿದರೆ ಸಾಲದು, ಮಹಿಳೆಯರೂ ವರ್ಷಕ್ಕೆ ಒಂದೆರಡು ಬಾರಿ ರಕ್ತದಾನ ಮಾಡಿ ಎಂದು ಮನವಿ ಮಾಡಿದರು.

ಪ್ರಾಂಶುಪಾಲ ಡಾ.ಆರ್.ದಶರಥ, ಮಾಂಡವ್ಯ ನಗರ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಡಾ.ಬಿ.ಎಸ್.ಶಿವಕುಮಾರ್, ಕೃಷಿಕ ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಟಿ.ಎನ್.ರಕ್ಷಿತ್‌ರಾಜ್, ವೈದ್ಯರಾದ ಡಾ.ಆದಿತ್ಯಗೌಡ, ಡಾ.ಎಸ್.ದೀಪಾ, ಡಾ.ಸೀಮಾ, ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಜಂಟಿ ಕಾರ್ಯದರ್ಶಿ ರಂಗಸ್ವಾಮಿ ಇತರರಿದ್ದರು.