ಜಿಲ್ಲೆ

ನೇತಾಜಿ ಸುಭಾಷ್'ಚಂದ್ರ ಬೋಸ್ ಜಯಂತಿ ಪ್ರಯುಕ್ತ ಮೈಸೂರಿನಲ್ಲಿ ರಕ್ತದಾನ ಶಿಬಿರ

ಮೈಸೂರು: ನಗರದ ಜೀವದಾರ ರಕ್ತ ನಿಧಿ ಕೇಂದ್ರದಲ್ಲಿ ಸ್ವಾತಂತ್ರೃ ಸೇನಾನಿ ಸುಭಾಷ್‌ಚಂದ್ರ ಬೋಸ್ ಜಯಂತಿ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಶಿಬಿರವನ್ನು ಉದ್ಘಾಟಿಸಿದ ಎನ್‌ಆರ್ ಸಂಚಾರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿವರಾಮಚಂದ್ರ ಮಾತನಾಡಿ, ನೇತಾಜಿ ಸುಭಾಷ್‌ಚಂದ್ರ ಬೋಸ್ ದೇಶದ ಸ್ವಾತಂತ್ರೃಕೋಸ್ಕರ ತಮ್ಮ ಬದುಕನ್ನೇ ಮುಡಿಪಾಗಿಟ್ಟರು. ‘ಯುವಕರೇ ದೇಶಕೋಸ್ಕರ ರಕ್ತವನ್ನು ನೀಡಿ, ದೇಶಕ್ಕೆ ಸ್ವಾತಂತ್ರೃ ಕೊಡಿಸುತ್ತೇನೆ’ ಎಂದು ಸುಭಾಷ್‌ಚಂದ್ರ ಬೋಸ್ ಕರೆ ನೀಡಿದ್ದರು. ಅವರ ನೆನಪಿನಲ್ಲಿ ರಕ್ತದಾನ ಮಾಡುತ್ತಿರುವುದು ಶ್ಲಾಘನೀಯ ಎಂದರು.

ರಕ್ತದಾನದ ಮಹತ್ವದ ಬಗ್ಗೆ ಯುವಜನರಿಗೆ ತಿಳಿಸುವ ಕಾರ್ಯ ಆಗಬೇಕು. ರಕ್ತದಾನ ಮಾಡುವ ಮೂಲಕ ಮತ್ತೊಬ್ಬರಿಗೆ ಸಹಾಯವಾಗಬೇಕು. ಮಾನವೀಯ ಮೌಲ್ಯಯುತ ಸಮಾಜ ನಿರ್ಮಾಣದ ಕಡೆ ಯುವಜನರು ಸದಾ ಚಿಂತಿಸಬೇಕು ಎಂದು ಕರೆ ನೀಡಿದರು.

ಜೀವದಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ಬ್ರಿಟಿಷರ ವಸಾಹತುಶಾಹಿ ಆಡಳಿತದಿಂದ ಭಾರತಕ್ಕೆ ಮುಕ್ತಿ ಸಿಗಲು ನೇತಾಜಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಸುಭಾಷ್‌ಚಂದ್ರ ಬೋಸ್ ದೇಶದ ವೀರ ಸೇನಾನಿ ಮತ್ತು ದಿಟ್ಟ ಸ್ವಾತಂತ್ರೃ ಹೋರಾಟ ಗಾರರಾಗಿದ್ದರು. ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.