ಮಂಡ್ಯ: ರಕ್ತದಾನದಿಂದ ವಿದ್ಯಾರ್ಥಿಗಳಲ್ಲಿ ಆಧ್ಯಾತ್ಮಿಕತೆ ಬೆಳೆಯುತ್ತದೆ. ಇನ್ನೊಬ್ಬರಿಗೆ ಸಹಾಯ ಮಾಡಬೇಕೆನ್ನುವ ಮಾನವೀಯ ಮೌಲ್ಯ ಹೆಚ್ಚಿಸುತ್ತದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಅಭಿಪ್ರಾಯಿಸಿದರು.
ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಕಾಲೇಜಿ(ಮಿಮ್ಸ್)ನಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಮಿಮ್ಸ್ ರಾಷ್ಟ್ರೀಯ ಸೇವಾ ಯೋಜನೆ, ಮಿಮ್ಸ್ ರಕ್ತನಿಧಿ ಕೇಂದ್ರದ ವತಿಯಿಂದ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾರಿಗಾದರೂ ಆಗಲಿ ಜೀವ ಉಳಿಸುವ ಬದುಕಿನ ಮಾನವೀಯ ಮೌಲ್ಯಗಳನ್ನು ರಕ್ತದಾನದಂತಹ ಕಾರ್ಯ ಬೆಳೆಸುತ್ತವೆ. ಆದ್ದರಿಂದ ಕಾಲೇಜುಗಳಲ್ಲಿ ಹೆಚ್ಚೆಚ್ಚು ರಕ್ತದಾನ ಶಿಬಿರ ಆಯೋಜಿಸಬೇಕು ಎಂದು ಹೇಳಿದರು.
ರಕ್ತದಾನ ತುಂಬಾ ಮಹತ್ವದ ದಾನವಾಗಿದ್ದು, ಅತ್ಯುತ್ತಮ ಔಷಧಕ್ಕೆ ಸಮಾನ. ರಕ್ತಕ್ಕೆ ಪರ್ಯಾಯವಾದ ವಸ್ತು ಯಾವುದು ಇಲ್ಲ. ಒಬ್ಬರು ನೀಡುವ ರಕ್ತದಿಂದ ನಾಲ್ವರಿಗೆ ಸಹಾಯಕವಾಗಲಿದೆ. ಅಪಘಾತ ಹಾಗೂ ಕಾಯಿಲೆ ಸುಧಾರಿಸಬೇಕಾದರೆ ಬಹಳಷ್ಟು ರಕ್ತ ಬೇಕಾಗುತ್ತದೆ. ಇಂತಹ ಕೆಲಸವನ್ನು ಮಿಮ್ಸ್ ವಿದ್ಯಾರ್ಥಿಗಳು, ಪ್ಯಾರಾ ಮೆಡಿಕಲ್, ನರ್ಸಿಂಗ್ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುತ್ತಿರುವುದು ಅತ್ಯುತ್ತಮವಾದ ಸೇವೆ ಎಂದು ತಿಳಿಸಿದರು.
ಮಿಮ್ಸ್‌ನ ರೋಗ ಲಕ್ಷಣಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಮಾಧವಿ, ರಕ್ತ ನಿಧಿ ಕೇಂದ್ರದ ರಫಿಕ್, ರೆಡ್‌ಕ್ರಾಸ್ ಸಂಸ್ಥೆ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ನಿರ್ದೇಶಕ ಮಂಗಲ ಎಂ.ಯೋಗೀಶ್, ಸಿಬ್ಬಂದಿ ರಾಮು, ಜಗದೀಶ್ ಇತರರಿದ್ದರು. ಇದೇ ವೇಳೆ 200 ಯೂನಿಟ್ ರಕ್ತ ಸಂಗ್ರಹವಾಯಿತು.