ಜಿಲ್ಲೆ

ಜೋಗಿಗೌಡನಕೊಪ್ಪಲಿನಲ್ಲಿ 48 ಯೂನಿಟ್ ರಕ್ತಸಂಗ್ರಹ: ಗಣೇಶ ಪ್ರತಿಷ್ಠಾಪನೆ ಅಂಗವಾಗಿ ಶಿಬಿರ ಆಯೋಜನೆ

ಮದ್ದೂರು: ತಾಲೂಕಿನ ಜೋಗಿಗೌಡನಕೊಪ್ಪಲು ಗ್ರಾಮದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 48 ಯೂನಿಟ್ ರಕ್ತ ಸಂಗ್ರಹ ಮಾಡಲಾಯಿತು.

ಗ್ರಾಮದ ವಿನಾಯಕ ಗೆಳೆಯರ ಬಳಗದಿಂದ ಗಣೇಶ ಪ್ರತಿಷ್ಠಾಪನೆ ಅಂಗವಾಗಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಸಂಗ್ರಹಿಸಿದ ರಕ್ತವನ್ನು ಸಂಜೀವಿನಿ ಬ್ಲಡ್ ಬ್ಯಾಂಕ್‌ಗೆ ಹಸ್ತಾಂತರ ಮಾಡಲಾಯಿತು.

ಆಯೋಜಕ ಕೌಡ್ಲೆ ಚೇತನ್ ಹೊಂಬಾಳೆ ಮಾತನಾಡಿ, ರಕ್ತಕ್ಕೆ ಪರ್ಯಾಯ ಔಷಧವಿಲ್ಲ. ರಕ್ತ ಮನುಷ್ಯನಿಗೆ ಜೀವಸಂಜೀವಿನಿಯಾಗಿ ಕೆಲಸ ಮಾಡುತ್ತದೆ. ರಕ್ತದಾನ ಶ್ರೇಷ್ಠದಾನವೆಂದು ಅರ್ಥೈಸಿಕೊಂಡು ಸದೃಢವಾದ ದೇಹದಲ್ಲಿ ಆರೋಗ್ಯವಿರುತ್ತದೆ ಎಂಬ ಭಾವನೆಯೊಡನೆ ಆರೋಗ್ಯವಂತ ಮನುಷ್ಯರು ನಿಯಮಿತವಾಗಿ ರಕ್ತದಾನ ಮಾಡಬಹುದಾಗಿದೆ ಎಂದು ಸಲಹೆ ನೀಡಿದರು.

ಅವಘಡ ಸಂಭವಿಸಿದಾಗ ಅಥವಾ ಸಾಂಕ್ರಾಮಿಕ ರೋಗಗಳು ಉಲ್ಬಣಿಸಿದಾಗ ರಕ್ತದ ಮಹತ್ವ ಹೆಚ್ಚಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಮತ್ತೊಂದು ಜೀವವನ್ನು ಉಳಿಸುವ ಕಾಯಕಕ್ಕೆ ಮಾನವೀಯತೆಯಿಂದ ರಕ್ತದಾನ ಮಾಡಬೇಕು. ಸಾಮಾಜಿಕ ಪಿಡುಗು ನಿರ್ಮೂಲನೆಗೆ ಯುವ ಮನಸ್ಸು ಸನ್ನದ್ಧವಾಗಬೇಕಿದೆ. ಈ ನಿಟ್ಟಿನಲ್ಲಿ ಗಣಪತಿ ಪ್ರತಿಷ್ಠಾಪನೆ ಅಂಗವಾಗಿ ರಕ್ತದಾನ ಆಯೋಜಿಸಲಾಗಿತ್ತು ಎಂದರು.

ಬಳಗದ ಸೋಮಶೇಖರ್, ಅಭಿಷೇಕ್, ಶರತ್, ದಿನೇಶ್, ಸಿದ್ದ, ಸಣ್ಣ, ಹೇಮಂತ್ ಇತರರಿದ್ದರು.