ಜಿಲ್ಲೆ

ಜೀವ ಉಳಿಸುವ ಮಹತ್ವದ ದಾನ : ದೇವದಾಸ್ ಶೆಟ್ಟಿ ಹಿಬರೋಡಿ ಬಣ್ಣನೆ

ಬೆಳ್ತಂಗಡಿ: ಉಜಿರೆ ಶ್ರೀ ಧ.ಮಂ.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೆಡ್‌ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು, ಎಸ್.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆ, ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಯಿತು.

ಲಯನ್ಸ್ ಅಧ್ಯಕ್ಷ ದೇವದಾಸ್ ಶೆಟ್ಟಿ ಹಿಬರೋಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮಲ್ಲಿ ಹಲವಾರು ದಾನಗಳಿದ್ದರೂ, ರಕ್ತದಾನ ಅದರಲ್ಲಿ ಶ್ರೇಷ್ಠ ದಾನ. ಒಬ್ಬರ ಜೀವವನ್ನು ಉಳಿಸಲು ರಕ್ತದಾನ ಬಹಳ ಮಹತ್ವದ್ದು. ರಕ್ತದಾನದ ಮಹತ್ವವನ್ನು ಇನ್ನೊಬ್ಬರಿಗೆ ತಿಳಿಸಲು ಇಂತಹ ಕಾರ್ಯಕ್ರಮ ಅಗತ್ಯ ಎಂದರು.

ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ.ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯ ಮ್ಯಾನೇಜಿಂಗ್ ಡೈರೆಕ್ಟರ್ ಎಂ.ಜನಾರ್ದನ್ ಮಾತನಾಡಿ, ರಕ್ತದಾನ ಎನ್ನುವುದು ಸ್ವಯಂಪ್ರೇರಿತ ದಾನ. ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ರಕ್ತವನ್ನು ಉತ್ಪಾದಿಸಲು ಸಾಧ್ಯವಾಗಿಲ್ಲ. ಯಾವಾಗ ಅನಿವಾರ್ಯ ಆಗುತ್ತದೆಯೋ ಆಗ ರಕ್ತದ ಮಹತ್ವ ತಿಳಿಯುತ್ತದೆ ಎಂದರು.

ಬ್ಲಡ್ ಬ್ಯಾಂಕ್ ಸಂಯೋಜಕ ಪ್ರವೀಣ್ ಶುಭಹಾರೈಸಿದರು. ಎಸ್.ಡಿ.ಎಂ. ಆಸ್ಪತ್ರೆಯ ವೈದ್ಯೆ ಡಾ.ವಿನೀತಾ ಮಾಹಿತಿ ನೀಡಿದರು. ರೋಟರಿ ಕಾರ್ಯದರ್ಶಿ ಸಂದೇಶ್ ರಾವ್, ಎಸ್.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪ್ರಯೋಗಾಲಯ ಮುಖ್ಯಸ್ಥ ಶಿತಿಕಂಠ ಭಟ್, ಯೋಜನಾಧಿಕಾರಿ ಪ್ರೊ.ದೀಪಾ ಆರ್.ಪಿ. ಉಪಸ್ಥಿತರಿದ್ದರು.

ಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ ಎಚ್. ಸ್ವಾಗತಿಸಿದರು. ಸ್ವಯಂಸೇವಕಿಯರಾದ ಮಾನ್ಯಾ ಮತ್ತು ವರ್ಷಾ ಕಾರ್ಯಕ್ರಮ ನಿರೂಪಿಸಿದರು.