ಜಿಲ್ಲೆ

55 ಯೂನಿಟ್ ರಕ್ತಸಂಗ್ರಹಿಸಿದ ವಿದ್ಯಾರ್ಥಿಗಳು: ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ಶಿಬಿರ

ಕೆ.ಎನ್.ರಾಘವೇಂದ್ರ

ಮಂಡ್ಯ: ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 55 ಯೂನಿಟ್ ರಕ್ತ ಸಂಗ್ರಹ ಮಾಡಲಾಯಿತು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ, ಮಂಡ್ಯ ವಿವಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕ-1, 2 ಮತ್ತು 3,ಯುವ ರೆಡ್‌ಕ್ರಾಸ್ ಘಟಕ, ಎನ್‌ಸಿಸಿ ಘಟಕ, ಮಾಂಡವ್ಯ ನಗರ ಲಯನ್ಸ್, ಕೃಷಿಕ ಲಯನ್ಸ್, ಮಿಮ್ಸ್ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಮಾದರಿಯಾದರು.

ಶಿಬಿರಕ್ಕೆ ಚಾಲನೆ ನೀಡಿದ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ರಕ್ತದಾನ ಎಂಬುವುದು ಬಹಳ ಮಹತ್ವದಾಗಿದೆ. ರಕ್ತಕ್ಕೆ ಪರ್ಯಾಯ ವಸ್ತುವಿಲ್ಲ. ಅಪಘಾತ, ಹೆರಿಗೆ ಸಂದರ್ಭಗಳಲ್ಲಿ ರಕ್ತ ಹೆಚ್ಚು ಪೋಲಾಗುತ್ತದೆ. ರಕ್ತ ಕೊಡುವುದರಿಂದ ಇಂತಹ ಸಮಯದಲ್ಲಿ ಒಂದು ಜೀವ ಉಳಿಸಬಹುದು. ಇನ್ನು ಪ್ರತಿ ಮೂರು ತಿಂಗಳಿಗೆ ರಕ್ತದಾನ ಮಾಡಿದರೆ ಆರೋಗ್ಯವಾಗಿರಬಹುದು ಎಂದರು.

ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಮಾತನಾಡಿ, ಇಂದಿಗೂ ಹಲವರು ರಕ್ತ ಸಿಗದೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ರಕ್ತದಾನಿಗಳೇ ನಿರಂತರವಾಗಿ ರಕ್ತದಾನ ಮಾಡಬೇಕು. ರಕ್ತದಾನ ಮಾಡುವುದರಿಂದ ಮೂರರಿಂದ ನಾಲ್ಕು ಜನರ ಪ್ರಾಣ ಉಳಿಸಬಹುದು ಎಂದು ಹೇಳಿದರು.

ಮಂಡ್ಯ ವಿಶ್ವವಿದ್ಯಾಲಯ ಕುಲಪತಿ ಡಾ.ಪುಟ್ಟರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಂಡ್ಯ ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಬಿ.ಎಸ್.ಶಿವಕುಮಾರ್, ರಾಷ್ಟ್ರೀಯ ಸೇವಾ ಯೋಜನೆ ಸಂಚಾಲಕಿ ನೇತ್ರಾವತಿ ಇತರರಿದ್ದರು.