ಜಿಲ್ಲೆ

ರಕ್ತದಾನದಂತಹ ಸಾಮಾಜಿಕ ಕಳಕಳಿ ಶ್ಲಾಘನೀಯ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

ಮಂಡ್ಯ: ವಾರ್ಷಿಕ ಮಹಾಸಭೆ ಜತೆಗೆ ಸಾಮಾಜಿಕ ಕಳಕಳಿ ಇಟ್ಟು ರಕ್ತದಾನ ಮಾಡುವ ಮೂಲಕ ಅನೇಕ ಜೀವಗಳನ್ನು ಉಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಮಾಚಿದೇವ ಸರ್ಕಾರಿ, ಅರೆಸರ್ಕಾರಿ ಮತ್ತು ನಿವೃತ್ತ ನೌಕರರ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ಜೀವಧಾರೆ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಕ್ತದಾನ ಎಲ್ಲ ದಾನಗಳಿಗಿಂತ ಶ್ರೇಷ್ಠವಾದ ದಾನ. ರಕ್ತಕ್ಕೆ ಪರ್ಯಾಯ ವಸ್ತು ಯಾವುದು ಇಲ್ಲ. ತಾಂತ್ರಿಕ ಜಗತ್ತಿನಲ್ಲಿ ಯಾವ ವಸ್ತುವನ್ನು ಬೇಕಾದರೂ ಕೃತಕವಾಗಿ ಸೃಷ್ಟಿ ಮಾಡಬಹುದು. ಆದರೆ ರಕ್ತವನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಮಾಚಿದೇವ ಸರ್ಕಾರಿ, ಅರೆಸರ್ಕಾರಿ ಮತ್ತು ನಿವೃತ್ತ ನೌಕರರ ಪತ್ತಿನ ಸಹಕಾರ ಸಂಘ ವಾರ್ಷಿಕ ಸಭೆಯ ಅಂಗವಾಗಿ ವಿನೂತನವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಸಮಾಜಕ್ಕೆ ಕೊಡುಗೆಯಾಗಿ ಸಾರ್ಥಕತೆ ಪಡೆಯುವ ಕೆಲಸ ಮಾಡುತ್ತಿದೆ. ರಕ್ತದಾನ ಸ್ವಯಂ ಪ್ರೇರಣೆಯಿಂದ ಬರಬೇಕು. ಮಾನವೀಯತೆಗೆ ಸಹಕಾರಿಯಾಗಿ ರಕ್ತದಾನ ಶಿಬಿರ ಆದರ್ಶಪ್ರಾಯವಾಗಬೇಕು. ರಕ್ತ ಜೀವಗಳನ್ನು ಉಳಿಸುವ ಅತ್ಯಂತವಾದ ದ್ರವ ಎಂದು ಹೇಳಿದರು.

ಇದಕ್ಕೂ ಮುನ್ನ ವಾರ್ಷಿಕ ಮಹಾಸಭೆ ಉದ್ಘಾಟಿಸಿದ ಮುಖ್ಯಮಂತ್ರಿಗಳ ವೈದ್ಯಕೀಯ ಸಲಹೆಗಾರ ಡಾ.ಎಚ್.ರವಿಕುಮಾರ್ ಮಾತನಾಡಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆ.22ರಿಂದ ಅ.7ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಮಡಿವಾಳ ಸಮಾಜದವರು ಜಾತಿ ಕಾಲಂನಲ್ಲಿ ಮಡಿವಾಳ, ದೋಬಿ, ಅಗಸ ಎಂದೇ ನಮೂದಿಸಬೇಕು. ಹಿಂದುಳಿದ ಮಡಿವಾಳ ಸಮಾಜ ನಿಖರವಾಗಿ ಎಷ್ಟು ಇದೆ ಎಂದು ತಿಳಿಸಲು ಸಮೀಕ್ಷೆಯಲ್ಲಿ ಜಾಗ್ರತೆ ವಹಿಸಿ. ಸದಸ್ಯರು ಸಂಘಟನೆಯನ್ನು ಭದ್ರ ಮಾಡಿ ಸದಸ್ಯತ್ವವನ್ನು ಹೆಚ್ಚು ಮಾಡಿ. ಈ ಮೂಲಕ ಸಂಘ ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.

ಸಂಘದ ಅಧ್ಯಕ್ಷ ಉಮೇಶ್, ಉಪಾಧ್ಯಕ್ಷ ಎಂ.ಜೆ.ಸಂಜೀವಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಖ್ಯಾತ್, ಗೊರವಾಲೆ ಚಂದ್ರಶೇಖರ್, ಜೀವಧಾರೆ ಟ್ರಸ್ಟ್ ಅಧ್ಯಕ್ಷ ನಟರಾಜ್ ಇದ್ದರು.

ಇದೇ ವೇಳೆ ಸಂಘದ ಸದಸ್ಯರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಅದರಂತೆ 15 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ನಂತರ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ರಕ್ತನಿಧಿ ಕೇಂದ್ರಕ್ಕೆ ಹಸ್ತಾಂತರ ಮಾಡಲಾಯಿತು. ಅಂತೆಯೇ ವಾರ್ಷಿಕ ಮಹಾಸಭೆ ಅಂಗವಾಗಿ ಮೊದಲ ಬಾರಿಗೆ ರಕ್ತದಾನ ಶಿಬಿರ ಆಯೋಜನೆಗೆ ಮೆಚ್ಚುಗೆ ವ್ಯಕ್ತವಾಯಿತು.